ಮಂಡ್ಯ: ಇಂದು ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆಯಾಗಿದೆ.
ಉಪಚುನಾವಣೆ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರು ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆ ಆಧರಿಸಿ ನಾಲ್ಕು ನಾಮಪತ್ರ ಸಲ್ಲಿಸಿರಬಹುದು ಎಂದು ಮಂಡ್ಯದಲ್ಲಿ ಚರ್ಚೆಯಾಗುತ್ತಿದೆ. ಶಿವರಾಮೇಗೌಡ ಅವರು ನಾಲ್ಕು ನಾಮಪತ್ರ ಸಲ್ಲಿಸಿರುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಎರಡು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಇಂದು ಒಟ್ಟು 6 ನಾಮಪತ್ರ ಸಲ್ಲಿಕೆಯಾಗಿವೆ. ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರು 4 ನಾಮ ಪತ್ರ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ. ಸಿದ್ದರಾಮಯ್ಯ ಅವರು 1 ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ನವೀನ್ ಕುಮಾರ್ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಎರಡು ಪಕ್ಷ ಒಗ್ಗಟ್ಟಾಗಿ ಸರ್ಕಾರ ನಡೆಸುತ್ತಿದೆ. ಹಾಗೆಯೇ ಮಂಡ್ಯದಲ್ಲೂ ಎಲ್ಲರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರ ಜೊತೆಗೆ ಮಾತುಕತೆ ನಡೆಸಿ ಒಗ್ಗಟ್ಟಿನಲ್ಲಿ ಚುನಾವಣೆ ಮಾಡುತ್ತೇವೆ ಎಂದು ಎಲ್.ಆರ್. ಶಿವರಾಮೇಗೌಡ ಅವರು ಹೇಳಿದ್ದಾರೆ.
ಶಿವರಾಮೇಗೌಡ ಅವರು ನಾಮಪತ್ರ ಸಲ್ಲಿಕೆಗೂ ಮುನ್ನಾ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿರುವ ಕಾಲಬೈರವೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿದ್ದರು. ಅಲ್ಲಿ ಕುಟುಂಬ ಸಮೇತರಾಗಿ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳ ಮುಂದೆ ಬಿಫಾರಂಗೆ ಪೂಜೆ ಮಾಡಿಸಿ ನಂತರ ನಾಮಪತ್ರ ಸಲ್ಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv