ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ (Channapatna By Election) ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು (Nikhil Kumaraswamy) ಜೆಡಿಎಸ್ ಕಣಕ್ಕೆ ಇಳಿಸಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರ ಜೊತೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಕುಮಾರಸ್ವಾಮಿಯನ್ನ ಹೇಗಾದ್ರು ಮುಗಿಸಬೇಕು ಅಂತ ಇದೆ.ಚನ್ನಪಟ್ಟಣದ ಕಾರ್ಯಕರ್ತರು, ಜನರು ಇದಕ್ಕೆ ಉತ್ತರ ಕೊಡಬೇಕು. ನಾನೇ ಚನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಎ. ಮಂಜು, ಪಕ್ಷಕ್ಕಾಗಿ ನಿಖಿಲ್ ಸ್ಪರ್ಧೆ ಮಾಡುತ್ತಾರೆ. ಎನ್‌ಡಿಎ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಗೇಶ್ವರ್‌ಗೆ (CP Yogeshwar) ಪ್ರಬಲ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಂಬ ಒತ್ತಾಯ ಪಕ್ಷದಲ್ಲಿ ಕೇಳಿ ಬಂದಿತ್ತು. ಜಯಮುತ್ತು ನಿಂತರೆ ಯೋಗೇಶ್ವರ್‌ಗೆ ಗೆಲುವು ಸುಲಭ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು.
ಕುಮಾರಸ್ವಾಮಿ ತೆರವಾಗಿರುವ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದವರೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರ ಒತ್ತಾಸೆಯಾಗಿತ್ತು. ಅಷ್ಟೇ ಅಲ್ಲದೇ ನಿಖಿಲ್ ಅಭ್ಯರ್ಥಿ ಆಗದೇ ಹೋದರೆ ನಾವು ಚುನಾವಣೆ ನಡೆಸುವುದಿಲ್ಲ ಎಂಬ ಸಂದೇಶವನ್ನು ದಳಪತಿಗಳಿಗೆ ಚನ್ನಪಟ್ಟಣ ನಾಯಕರು ರವಾನೆ ಮಾಡಿದ್ದರು. ಈ ಕಾರಣಕ್ಕೆ ಅಂತಿಮವಾಗಿ ಕುಮಾರಸ್ವಾಮಿ ಅವರನ್ನೇ ಜೆಡಿಎಸ್ ಕಣಕ್ಕೆ ಇಳಿಸಿದೆ.