ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಬಿಎಂಪಿ ವಾರ್ಡ್ ಉಪಚುನಾವಣೆ ನಡೆಯುತ್ತಿದೆ. ಕಾವೇರಿಪುರ ಹಾಗೂ ಸಗಾಯಿಪುರ ಎರಡು ವಾರ್ಡ್ ಗಳಲ್ಲೂ ಬಿಜೆಪಿ ಗೆಲ್ಲುವ ಸಾಧಿಸಲು ಕಸರತ್ತು ನಡೆಸುತ್ತಿದೆ.
ಸದ್ಯ 198 ವಾರ್ಡ್ ಗಳಲ್ಲಿ ಬಿಜೆಪಿ 101 ಸ್ಥಾನ ಗೆದ್ದಿದೆ. ಈಗ ಉಪಚುನಾವಣೆಯ 2 ವಾರ್ಡ್ ಬಿಜೆಪಿ ತೆಕ್ಕೆಗೆ ಜಾರಿದರೆ ಬಿಜೆಪಿ ಮತ್ತೆ ಮೇಯರ್, ಉಪಮೇಯರ್ ಕನಸು ಕಾಣುವ ಆಸೆ ಹೊಂದಿದೆ. ಕಾಂಗ್ರೆಸ್ 78, ಜೆಡಿಎಸ್ 15 ವಾರ್ಡ್ ಗೆದ್ದಿದೆ. ಇತ್ತ ಪಕ್ಷೇತರರು 7 ಮಂದಿ ಕಾರ್ಪೋರೆಟರ್ ಗಳು ಇದ್ದಾರೆ. ಈಗ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿಯೇ ವಾರ್ಡ್ ಗಳಲ್ಲಿ ಮೈತ್ರಿ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿದೆ. ಈ 2 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಮತ್ತೆ ಬಿಜೆಪಿ ಸಂಖ್ಯಾಬಲ ಹೆಚ್ಚಾಗಲಿದೆ.
Advertisement
Advertisement
ಈ ಎರಡು ವಾರ್ಡ್ ಗಳಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಮೇಯರ್, ಉಪಮೇಯರ್ ಸ್ಥಾನದ ಚುನಾವಣೆಗೆ ಬಿಜೆಪಿ ಕಣ್ಣಿಡಬಹುದು. ಆಗ ಪಕ್ಷೇತರರನ್ನ ತಮ್ಮತ್ತ ಸೆಳೆಯಲು ಲೋಕಸಭಾ ಚುನಾವಣೆ ಫಲಿತಾಂಶ, ವಾರ್ಡ್ ಉಪಚುನಾವಣೆಯ ಫಲಿತಾಂಶ ಸಾಕ್ಷಿಯಾಗಬೇಕೆಂದು ಬಿಜೆಪಿ ಯತ್ನಿಸುತ್ತಿದೆ. ಮತ್ತೊಂದೆಡೆ ಮೈತ್ರಿ ಪಕ್ಷಗಳು ಸಹ ಲೋಕಸಭೆಯಲ್ಲಿ ಸಿಂಗಲ್ ನಂಬರ್ ಗೆ ತೃಪ್ತಿ ಪಡೆದಿದ್ದು, ಈ ಮುಖಭಂಗದಿಂದ ಕೊಂಚ ಹೊರಬರಲು ವಾರ್ಡ್ ಉಪಚುನಾವಣೆಯಲ್ಲಿ ಗೆಲ್ಲಬೇಕೆಂದು ಚಿಂತಿಸಿದೆ. ಹೀಗಾಗಿ ಕಾವೇರಿಪುರ ಮತ್ತು ಸಗಾಯಿಪುರ ಉಪಚುನಾವಣೆ ಪ್ರಚಾರ ರಂಗೇರಿದ್ದು, ಮೇ.29 ರಂದು ಮತದಾರ ಪ್ರಭು ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ.