ವಿಜಯಪುರ: ಒಳ್ಳೆಯದು ಚುನಾವಣೆ ಅಗಲೇಬೇಕು, ಚುನಾವಣೆ ನಡೆಯುವ ಮತಕ್ಷೇತ್ರಗಳಲ್ಲಿ ಜನತೆ ನಿಶ್ಚಿತವಾಗಿ ಕಾಂಗ್ರೆಸ್‍ಗೆ ಗೆಲುವುವನ್ನು ತಂದುಕೊಡುತ್ತಾರೆ ಎಂದು ಉಪಚುನಾವಣೆ ಕುರಿತು ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ನಾನು ಹೋದಕಡೆಯಲ್ಲ ಜನತೆ ಶಾಸಕರಿದ್ದಿದ್ದರೆ ಒಳ್ಳೆಯದಾಗುತಿತ್ತು. ನಮಗೆ ಸೂಕ್ತ ನ್ಯಾಯ, ಸ್ಪಂದನೆ ಸಿಗುತಿತ್ತು. ಇಂತಹ ಕಷ್ಟದ ಸಂದರ್ಭದಲ್ಲಿ ಶಾಸಕರು ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾರೆ. ನೊಂದು ಬದುಕನ್ನು ಕಳೆದುಕೊಂಡ ಸಂದರ್ಭದಲ್ಲಿ ಇವರು ಏನು ಮಾಡಲಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಅನರ್ಹ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ
ಅನರ್ಹ ಶಾಸಕರ ಹಣೆಬರಹ ಇನ್ನು ಸುಪ್ರೀಂ ಕೋರ್ಟ್‍ನಲ್ಲಿ ಏನಾಗುತ್ತದೆ ನೋಡೋಣ. ಈ ಉಪಚುನಾವಣೆಯಲ್ಲಿ ಒಟ್ಟು 15ರ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ವಿಶ್ವಾಸವಿದೆ. ನಾನು, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ ಸೇರಿದಂತೆ ಎಲ್ಲರೂ ಜಂಟಿಯಾಗಿ ಸೇರಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
ಕರ್ನಾಟಕ ಉಪಚುನಾವಣೆ, ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ಇಂದು ದಿನಾಂಕ ಪ್ರಕಟಿಸಿದ್ದಾರೆ. ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.
ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ.