– ಇವಿಎಂ ಜೊತೆ ವಿವಿ ಪ್ಯಾಟ್ ಇರಲಿದೆ
– 4 ಕ್ಷೇತ್ರಗಳಲ್ಲಿ 1361 ಮತಗಟ್ಟೆ ಸ್ಥಾಪನೆ
ಬೆಂಗಳೂರು: ಸಿಲಿಕಾನ್ ಸಿಟಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಮಾಹಿತಿ ನೀಡಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರಗಳಿಗೆ ಡಿಸೆಂಬರ್ 5 ಮತದಾನ ನಡೆಯಲಿದ್ದು, ಚುನಾವಣಾ ಸಿದ್ಧತೆ ಆರಂಭಗೊಂಡಿದೆ. ನೀತಿ ಸಂಹಿತೆ ಸಹ ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದರು.
Advertisement
Advertisement
ಉಪ ಚುನಾವಣೆಯಲ್ಲಿ ಈ ಬಾರಿಯೂ ಇವಿಎಂ ಜೊತೆ ವಿವಿ ಪ್ಯಾಟ್ ಕಡ್ಡಾಯವಾಗಿದ್ದು, ಬೆಂಗಳೂರಿನ ಆಯಾ ವಿಧಾನಸಭಾ ಕ್ಷೇತ್ರಗಳ ಭದ್ರತಾಕೊಠಡಿಯಲ್ಲೇ ಇವಿಎಂ ಶೇಖರಿಸಿಡಲಾಗಿದೆ. ಮಾದರಿ ನೀತಿ ಸಂಹಿತೆ ಇಂದಿನಿಂದ ಡಿ.11ರ ವರೆಗೆ ಜಾರಿಯಲ್ಲಿರಲಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಮತಗಟ್ಟೆ ಅಧಿಕಾರಿ ನೇಮಕವಾಗಿದ್ದಾರೆ. 4 ಕ್ಷೇತ್ರಗಳಿಗೆ ಒಟ್ಟು 5,988 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಕ್ರೋ ಅಬ್ಸರ್ವರ್ಸ್ ಗಳನ್ನೂ ಮತದಾನ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಸ್ ಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.
Advertisement
ಉಪಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ 080 22975561 ಅಥವಾ 88841 18033 ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಜೊತೆಗೂ ಸಭೆ ನಡೆಸಲಾಗುವುದು ಎಂದರು.
Advertisement
ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನವಾಗಿದೆ. ನ.19 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನ.21 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.
ಡಿ.5 ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿ.9 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಡಿ.11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
4 ಕ್ಷೇತ್ರಗಳಿಂದ ಈಗಾಗಲೇ 6 ನಾಮಪತ್ರ ಸಲ್ಲಿಕೆಯಾಗಿದ್ದು, ಕೆ.ಆರ್ ಪುರ ಕ್ಷೇತ್ರದಲ್ಲಿ 437 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯಶವಂತಪುರ ಕ್ಷೇತ್ರದಲ್ಲಿ 461, ಮಹಾಲಕ್ಷ್ಮಿ ಲೇಔಟ್ 270, ಶಿವಾಜಿನಗರ 193 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4 ಕ್ಷೇತ್ರದಲ್ಲಿ ಒಟ್ಟು 1361 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೆಆರ್ ಪುರ ಕ್ಷೇತ್ರದಲ್ಲಿ ಒಟ್ಟು 4,81,132, ಯಶವಂತಪುರದಲ್ಲಿ 4,75,759, ಮಹಾಲಕ್ಷ್ಮಿ ಲೇಔಟ್ ನಲ್ಲಿ 2,83,885, ಶಿವಾಜಿನಗರದಲ್ಲಿ 1,91,618 ಮತದಾರರಿದ್ದಾರೆ.