ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದ್ದು, ದಿಗ್ಗಜರೇ ಫೀಲ್ಡ್ ಗಿಳಿದು ಮತಯಾಚನೆ ಮಾಡ್ತಿದ್ದಾರೆ. ಆದ್ರೆ ಭಾನುವಾರದಿಂದ ಪ್ರಚಾರ ಆರಂಭಿಸಲಿರುವ ಸಿಎಂ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಮಾತ್ರ ಕ್ಯಾಂಪೇನ್ ಮಾಡಲಿದ್ದಾರೆ.
ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿರುವ ಸಿಎಂ, ದೋಸ್ತ್ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಜಮಖಂಡಿ ಮತ್ತು ಬಳ್ಳಾರಿಗೆ ಹೋಗೋದು ಡೌಟ್. ಅಲ್ಲದೆ ಈ ಹಿಂದೆ ಉಗ್ರಪ್ಪ ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಎಚ್‍ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಪ್ರಚಾರದಿಂದ ಹಿಂದೆ ಸರಿಯುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿವೆ.
ಈ ಮಧ್ಯೆ ಇಂದು ನಿನ್ನೆಯಿಂದ ಜಮಖಂಡಿಯಲ್ಲಿ ಮತಯಾಚಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕುಂಬಾರಹಳ್ಳ, ತುಂಗಳ, ಲಿಂಗಾನೂರ ಹಾಗೂ ಕೊಣ್ಣೂರು ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಜಗದೀಶ್ ಶೆಟ್ಟರ್ ಮತಯಾಚಿಸಲಿದ್ದಾರೆ. ಇನ್ನು ಬಳ್ಳಾರಿ ರಣರಂಗಕ್ಕೆ ಎಂಟ್ರಿ ಕೊಡಲಿರುವ ಬಿಎಸ್‍ವೈ ಸಂಡೂರಿನಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪಗೆ ಡಿಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ. ಶುಕ್ರವಾರ ಪ್ರಚಾರದ ವೇಳೆ ಕಾಫಿ ಕುಡಿದ ಡಿಕೆ ಶಿವಕುಮಾರ್, ಒಗ್ಗರಣೆ ಹಾಕಿದ ಮಂಡಕ್ಕಿ, ಮಿರ್ಚಿ ಬಜ್ಜಿ ಸವಿದ್ರು. ಜೊತೆಗೆ ದಾರಿಯುದ್ದಕ್ಕೂ ಜನರೊಂದಿಗೆ ಆತ್ಮೀಯತೆಯಿಂದ ಮಾತನಾಡಿದ್ರು.
ಇತ್ತ ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡ ಪರ 2ನೇ ದಿನವೂ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಪಾಂಡವಪುರ ಮತ್ತು ಕೆಆರ್ ಪೇಟೆಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಅತ್ತ ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಪರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಮತಯಾಚಿಸಲಿದ್ದಾರೆ.
ರಾಮನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭರ್ಜರಿ ಪ್ರಚಾರ ನಡೆಸಿದ್ದ ಅನಿತಾ ಕುಮಾರಸ್ವಾಮಿ ಇಂದು ಪ್ರಚಾರ ಮಾಡದೇ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಇನ್ನು ನಾಳೆ ಎಚ್‍ಡಿ ದೇವೇಗೌಡರೇ ರಾಮನಗರದ ರಣರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್‍ಗೆ ಸಿ.ಪಿ ಯೋಗೇಶ್ವರ್ ಸಾಥ್ ನೀಡಲಿದ್ದಾರೆ.
ನಿನ್ನೆ ಬಾಗಲಕೋಟೆಯಲ್ಲಿ ಮಾತನಾಡಿದ ಸಿ.ಎಂ ಇಬ್ರಾಹಿಂ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕವಾಗಿ ಏಕವಚನದಲ್ಲೇ ಮಾತನಾಡಿದ್ರು. ಅಲ್ಲದೆ ಬಿಎಸ್‍ವೈಗೆ ಶೋಭಕ್ಕಂದೇ ಚಿಂತೆ ಅಂತಾ ಕಿಚಾಯಿಸಿದ್ದಾರೆ.
ಒಟ್ಟಿನಲ್ಲಿ ಉಪರಣಕಣ ದಿನೇ ದಿನೇ ಕಾವೇರುತ್ತಿದ್ದು, 3 ಪಕ್ಷಗಳ ದಿಗ್ಗಜರು ಮತಯಾಚನೆಗೆ ಬೀದಿಗೆ ಇಳಿದಿದ್ದಾರೆ. ಆದ್ರೆ ಯಾವ ಪಕ್ಷದ ಅಭ್ಯರ್ಥಿಗೆ ಜನರು ಮತ ನೀಡುವುದರ ಮೂಲಕ ಆಶೀರ್ವಾದಿಸಿ ಭವಿಷ್ಯ ಬದಲಾಯಿಸ್ತಾರೆ ಅಂತ ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv





