ಪೆಟ್ರೋಲ್, ಡೀಸೆಲ್ ಖರೀದಿಸಿದ್ರೆ ಬೈಕ್, ಲ್ಯಾಪ್‍ಟಾಪ್ ಉಚಿತ!

Public TV
2 Min Read
Petrol Bick

ಭೋಪಾಲ್: ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಉಚಿತ ಕೊಡುಗೆಗಳನ್ನು ಘೋಷಿಸುತ್ತಾರೆ. ಆದರೆ ಮಧ್ಯಪ್ರದೇಶದ ಪೆಟ್ರೋಲ್ ಪಂಪ್ ಮಾಲೀಕರು ಗ್ರಾಹಕರನ್ನು ಸೆಳೆಯಲು ಉಚಿತ ಬೈಕ್, ಲ್ಯಾಪ್‍ಟಾಪ್, ಎಸಿ, ಸ್ವಯಂ ಚಾಲಿತ ವಾಶಿಂಗ್ ಮಷಿನ್ ಸೇರಿದಂತೆ ವಿವಿಧ ಕೊಡುಗೆ ನೀಡುವುದಾಗಿ ಆಫರ್ ಪ್ರಕಟಿಸಿದ್ದಾರೆ.

ಮಧ್ಯಪ್ರದೇಶ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಟ್ ಹಾಕಿದೆ. ಹೀಗಾಗಿ ನೆರೆಯ ರಾಜ್ಯಗಳಿಗಿಂತ ಬೆಲೆ ಹೆಚ್ಚಾಗಿದೆ. ರಾಜ್ಯದ ಮೂಲಕ ಹಾದು ಹೋಗುವ ಲಾರಿ ಚಾಲಕರು ಪಕ್ಕದ ರಾಜ್ಯದಲ್ಲಿಯೇ ಡೀಸೆಲ್ ತುಂಬಿಸಿಕೊಂಡು ಬರುತ್ತಿದ್ದಾರೆ.

ಇನ್ನು ಗಡಿಭಾಗದಲ್ಲಿರುವ ಜನರು ಪಕ್ಕದ ರಾಜ್ಯದ ಪಂಪ್‍ಗಳಿಗೆ ಹೋಗಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸುತ್ತಿದ್ದಾರೆ. ಇದರಿಂದಾಗಿ ಗ್ರಾಹಕರ ಸಂಖ್ಯೆ ಇಳಿಕೆಯಾಗುತ್ತಿದೆ. ಆಫರ್ ನೀಡಿದರೆ ಗ್ರಾಹಕರನ್ನು ಉಳಿಸಿಕೊಳ್ಳಬಹುದು ಹಾಗೂ ನಮ್ಮ ವ್ಯಾಪಾರವನ್ನು ಹೆಚ್ಚಿಸಬಹುದು ಎನ್ನುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ. ಶಿವಪುರಿ, ಅಶೋಕನಗರ ಸೇರಿದಂತೆ ಕೆಲವು ಗಡಿ ಜಿಲ್ಲೆಗಳ 125 ಪೆಟ್ರೋಲ್ ಪಂಪ್ ಮಾಲೀಕರು ಇಂತಹ ಆಫರ್ ನೀಡುತ್ತಿದ್ದಾರೆ.

petrol pump 2

ಏನೇನು ಫ್ರೀ?
100 ಲೀಟರ್ ಡೀಸೆಲ್ ಖರೀದಿಸುವ ಲಾರಿ ಚಾಲಕರಿಗೆ ಉಚಿತ ಉಪಹಾರ ಹಾಗೂ ಟೀ ನೀಡಲಾಗುತ್ತಿದೆ. 5 ಸಾವಿರ ಲೀಟರ್ ಇಂಧನ (ಪೆಟ್ರೋಲ್ ಅಥವಾ ಡೀಸೆಲ್) ಖರೀದಿಸಿದರೆ ಸೈಕಲ್ ಅಥವಾ ವಾಚ್, 15 ಸಾವಿರ ಲೀಟರ್ ಗೆ ಕಪಾಟು, ಕಪಾಟು, ಸೋಫಾ ಸೆಟ್ ಅಥವಾ 100ಗ್ರಾಂ ಬೆಳ್ಳಿ ನಾಣ್ಯ, 25 ಸಾವಿರ ಲೀಟರ್ ಕೊಂಡರೆ ಸ್ವಯಂಚಾಲಿತ ವಾಷಿಂಗ್ ಮಶೀನ್, 50 ಸಾವಿರ ಲೀಟರ್ ಖರೀದಿಸಿದರೆ ಎಸಿ ಅಥವಾ ಲ್ಯಾಪ್‍ಟಾಪ್, 1 ಲಕ್ಷ ಲೀಟರ್ ಕೊಂಡರೆ ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಉಚಿತವಾಗಿ ನೀಡಲಾಗುವುದು ಆಫರ್ ಪ್ರಕಟಿಸಿದ್ದಾರೆ.

ಈ ರೀತಿ ಆಫರ್ ನೀಡಿದ ಮೇಲೆ ವ್ಯಾಪಾರದಲ್ಲಿ ಚೇತರಿಕೆ ಕಂಡುಕೊಂಡಿದ್ದೇವೆ. ರಿಯಾಯಿತಿ ಉದ್ದೇಶದಿಂದಲಾದರೂ ಚಾಲಕರು 100 ಲೀಟರ್ ವರೆಗೆ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುತ್ತಿದ್ದಾರೆ ಎಂದು ಪೆಟ್ರೋಲ್ ಪಂಪ್ ಮಾಲೀಕ ಅಂಜುಲ್ ಖಂಡೇವಾಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿ ಪ್ರಕಾರ ಮಧ್ಯ ಪ್ರದೇಶ ಸರ್ಕಾರವು ಪೆಟ್ರೋಲ್ ಮೇಲೆ ಶೇ.27 ಮತ್ತು ಡೀಸೆಲ್ ಮೇಲೆ ಶೇ.22 ವ್ಯಾಟ್ ಹೇರಿದೆ. ಹೀಗಾಗಿ ನಮ್ಮ ವ್ಯಾಪಾರದ ಮೇಲೆ ಭಾರೀ ಹೊಡೆತ ಬಿದ್ದಿದೆ. ಕೂಡಲೇ ಸರ್ಕಾರ ವ್ಯಾಟ್ ಪ್ರಮಾಣವನ್ನು ಇಳಿಸಬೇಕು ಎಂದು ಪಂಪ್ ಮಾಲೀಕರು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *