ಹೈದರಾಬಾದ್: ಉದ್ಯಮಿಯೊಬ್ಬರು 12 ಲಕ್ಷ ರೂ. ಬಾಕಿ ಹಣ ಪಾವತಿಸದೆ ಸ್ಟಾರ್ ಹೊಟೇಲಿನಿಂದ ಪರಾರಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ವಿಶಾಖಪಟ್ಟಣ ಮೂಲದ ಉದ್ಯಮಿ ಎ. ಶಂಕರ್ ನಾರಾಯಣ ಅವರು ಹೊಟೇಲಿನಲ್ಲಿ 100ಕ್ಕೂ ಹೆಚ್ಚು ದಿನ ಇದ್ದರು. ಆದರೆ ಹೊಟೇಲಿನ ಪೂರ್ತಿ ಬಿಲ್ ಪಾವತಿಸಿದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಐಷಾರಾಮಿ ಕೊಠಡಿಯಲ್ಲಿ ಉದ್ಯಮಿ 102 ದಿನ ತಂಗಿದ್ದಾರೆ. ಈ 102 ದಿನದ ಹೊಟೇಲ್ ಬಿಲ್ 25.96 ಲಕ್ಷ ರೂ. ಆಗಿದ್ದು, ಅದರಲ್ಲಿ ಶಂಕರ್ ನಾರಾಯಣ ಅವರು 13.62 ಲಕ್ಷ ರೂ. ಪಾವತಿಸಿದ್ದಾರೆ. ಇದರಲ್ಲಿ 12.34 ಲಕ್ಷ ರೂ. ಬಿಲ್ ಬಾಕಿ ಇತ್ತು. ಆದರೆ ಈ ಮಧ್ಯೆ ಉದ್ಯಮಿ ಹೊಟೇಲ್ ಸಿಬ್ಬಂದಿಗೆ ಮಾಹಿತಿ ನೀಡದೇ ನಿರ್ಗಮಿಸಿದ್ದಾರೆ.
ಉದ್ಯಮಿ ಎಸ್ಕೇಪ್ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಹೊಟೇಲ್ ಸಿಬ್ಬಂದಿ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಉದ್ಯಮಿ ಬಾಕಿ ಉಳಿದ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ನಂತರ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಕಂಗಾಲಾದ ಹೊಟೇಲ್ ಆಡಳಿತ ಮಂಡಳಿ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಉದ್ಯಮಿ ವಿರುದ್ಧ ದೂರು ದಾಖಲಿಸಿದೆ.
ಈ ಮಧ್ಯೆ ಉದ್ಯಮಿ ತನ್ನ ಮೇಲೆ ಹೊಟೇಲ್ ಆಡಳಿತ ಮಂಡಳಿ ಮಾಡುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಸಂಪೂರ್ಣ ಬಿಲ್ ಪಾವತಿಸಿಯೇ ಅಲ್ಲಿಂದ ಬಂದಿದ್ದೇನೆ. ಆದರೆ ಇದೀಗ ಆರೋಪದಿಂದ ನನ್ನ ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ನಾನು ಹೊಟೇಲ್ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಘಟನೆ ಸಂಬಂಧ ಹೊಟೇಲ್ ಆಡಳಿತ ಮಂಡಳಿ ನೀಡಿದ ದೂರಿನಂತೆ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಸಬ್ ಇನ್ಸ್ ಪೆಕ್ಟರ್ ಪಿ. ರವಿ ತಿಳಿಸಿದ್ದಾರೆ.