ಫರೀದ್‍ಕೋಟ್: ಹಾಡಹಗಲೇ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ.
ಸ್ಥಳೀಯ ಉದ್ಯಮಿಯಾದ ರವೀಂದರ್ ಪಪ್ಪು ಕೊಚ್ಚರ್ ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ ಸುಮಾರು 3ಗಂಟೆ ವೇಳೆಯಲ್ಲಿ ರವೀಂದರ್ ಅವರನ್ನ ಅವರ ಮಿಲ್ ಹೊರಗಡೆ ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಫರೀದ್‍ಕೋಟ್ ಜಿಲ್ಲೆಯ ಜೈತೋ ನಗರದ ಸ್ಥಳೀಯ ಗ್ಯಾಂಗ್‍ವೊಂದರ ಸದಸ್ಯ ಎನ್ನಲಾಗಿದೆ.
Advertisement
Advertisement
ರವೀಂದರ್ ಅವರು ಮಿಲ್‍ನ ಗೇಟ್ ಹೊರಗಡೆ ಕಾರ್ ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರ್ ಬಂದಿದೆ. ಕೂಡಲೇ ವ್ಯಕ್ತಿಯೊಬ್ಬ ಕಾರಿನಿಂದ ಕೆಳಗಿಳಿದು ಡ್ರೈವರ್ ಸೀಟ್‍ನ ಕಿಟಕಿ ಮೂಲಕವೇ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ವ್ಯಕ್ತಿ ಸತ್ತಿದ್ದಾರೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ 5ನೇ ಬಾರಿಗೆ ಗುಂಡು ಹಾರಿಸಿ ಕಾರ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರವೀದರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಲೆ ಹಾಗೂ ಕತ್ತಿನ ಭಾಗಕ್ಕೆ ಗುಂಡು ತಗುಲಿದ್ದವು ಎಂದು ಪೊಲೀಸರು ಹೇಳಿದ್ದಾರೆ.
Advertisement
ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ದಾಳಿಕೋರ ವ್ಯಕ್ತಿಯ ಕಾರಿನಲ್ಲಿ ಇಬ್ಬರು ಇದ್ದರು. ಒಬ್ಬ ಚಾಲಕನ ಸೀಟ್‍ನಲ್ಲಿ ಕುಳಿತಿದ್ದ. ಮತ್ತೊಬ್ಬ ಕಾರಿನಿಂದ ಕೆಳಗಿಳಿದು ಬಂದು ಗುಂಡು ಹಾರಿಸಿದ್ದಾನೆ. ವಾಹನದ ಗುರುತು ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಫರೀದ್‍ಕೋಟ್‍ನ ಎಸ್‍ಎಸ್‍ಪಿ ನಾನಕ್ ಸಿಂಗ್ ಹೇಳಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
ಇದೇ ವರ್ಷ ಫೆಬ್ರವರಿಯಲ್ಲಿ ಮೂವರು ಗ್ಯಾಂಗ್‍ಸ್ಟರ್‍ಗಳು ಮಿಲ್ ಹೊರಗಡೆ ಗಾಳಿಯಲ್ಲಿ ಗುಂಡು ಹಾರಿಸಿ, ರವೀಂದರ್ ಅವರ ಕಾರಿನೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರವೀಂದರ್ ಅವರು ಆ ಗ್ಯಾಂಗ್‍ಸ್ಟರ್‍ಗಳಿಗೆ ಸುಲಿಗೆ ಹಣ ನೀಡಲು ನಿರಾಕರಿಸಿದ್ರು. ಅವರ ಪ್ರಾಣಕ್ಕೆ ಅಪಾಯವಿದ್ದಿದ್ದರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂವರನ್ನ ಬಂಧಿಸಲಾಗಿತ್ತು. ಒಂದು ವಾರದ ನಂತರ ಮೊಗಾದಲ್ಲಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಇದೇ ತಂಡ ಮತ್ತೆ ದಾಳಿ ನಡೆಸಿರಬಹುದು ಎನ್ನಲಾಗಿದೆ.
ರವೀಂದರ್ ಅವರ ಪ್ರಾಣಕ್ಕೆ ಅಪಾಯವಿದ್ದರೂ ಸೂಕ್ತ ಭದ್ರತೆ ಒದಗಿಸಿರಲಿಲ್ಲ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಘಟನೆಯ ನಂತರವೂ ನಮ್ಮ ಅಣ್ಣನಿಗೆ ಪೊಲೀಸ್ ಭದ್ರತೆ ಯಾಕೆ ನೀಡಲಿಲ್ಲ? ಅವರಿಗಾದ ಗತಿ ನೋಡಿ ನಮಗೂ ಜೀವಭಯವಾಗುತ್ತಿದೆ ಎಂದು ಮೃತ ರವೀಂದರ್ ಅವರ ಸಹೋದರ ನರೇಂದರ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.