ಬೆಂಗಳೂರು: ನಿರ್ದೇಶಕ ನಂದಕಿಶೋರ್ (Nanda Kishore) ಅವರಿಗೆ ಸಾಲ ನೀಡಿದ್ದ ಉದ್ಯಮಿಯನ್ನು ಅಪಹರಣ (Kidnap) ಮಾಡಿದ ಪ್ರಕರಣದಲ್ಲಿ ಯಶಸ್ವಿನಿ ಗೌಡಳನ್ನು (Yashaswini Gowda) ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಸೆ.26ರಂದು ಸಂಜೆ 6: 30ರ ಸುಮಾರಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮನೋಜ್ ಅವರನ್ನು ರೌಡಿಗಳ ಗುಂಪು ಅಪಹರಿಸಿತ್ತು.
ಈ ಪ್ರಕರಣದಲ್ಲಿ ಬೇಕರಿ ರಘು, ರಾಜೇಶ್, ವೆಂಕಟೇಶ್ ಸೇರಿದಂತೆ ಹಲವರನ್ನು ಬಂಧನ ಮಾಡಲಾಗಿತ್ತು. ಮಂಡ್ಯದಲ್ಲಿ ಬೇಕರಿ ರಘು ಅರೆಸ್ಟ್ ಮಾಡುವ ವೇಳೆ ಪೊಲೀಸರಿಗೆ ಯಶಸ್ವಿನಿ ಅಡ್ಡಿಪಡಿಸಿದ್ದಳು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಎಫ್‌ಐಆರ್ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಮಾಜಿ ರೌಡಿಶೀಟರ್ ಯಶಸ್ವಿನಿ ಪಾತ್ರವಿರುವುದು ಕಂಡಬಂದಿತ್ತು. ಪುಟ್ಟೇನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಯಶಸ್ವಿನಿಯನ್ನು ಕೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಮಹಿಳಾ ಅಧಿಕಾರಿಯ ಬೆಡ್‌ರೂಮ್ ವಿಡಿಯೋ ಸೆರೆ ಹಿಡಿದು 50 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ – ನಕಲಿ ಪತ್ರಕರ್ತರು ಅರೆಸ್ಟ್
ಏನಿದು ಕೋಕಾ ಕಾಯ್ದೆ?
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA), ಇದು ಸಂಘಟಿತ ಅಪರಾಧಗಳು, ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಜಾರಿಗೆ ತಂದ ಕಠಿಣ ಕಾನೂನಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ, ಜಾಮೀನು ರಹಿತ ಬಂಧನ ಮತ್ತು ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುತ್ತದೆ.
ಈ ಕಾಯ್ದೆಯ ಅಡಿಯಲ್ಲಿ, ಸಂಘಟಿತ ಅಪರಾಧಗಳಲ್ಲಿ ಭಾಗವಹಿಸುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದು. ಜೊತೆಗೆ 1 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೂ ದಂಡ ವಿಧಿಸಲು ಈ ಕಾಯ್ದೆಯ ಅಡಿ ಅವಕಾಶವಿದೆ. ಆರೋಪಿಗಳಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.ಆರೋಪ ಪಟ್ಟಿ ಸಲ್ಲಿಸಲು 365 ದಿನಗಳವರೆಗೆ ಸಮಯಾವಕಾಶ ಇರುತ್ತದೆ.
ಗೌರಿ ಹತ್ಯೆ ಪ್ರಕರಣವನ್ನು ನಡೆಸಿದ್ದ ವಿಶೇಷ ತನಿಖಾ ತಂಡ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಪ್ರಯೋಗಿಸಿದೆ. ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ 2019ರ ಪರೀಕ್ಷೆಯ ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆಯನ್ನು ಹಾಕಲಾಗುತ್ತದೆ.

