ಬೆಂಗಳೂರು: ಮುಖ್ಯಮಂತ್ರಿಗಳೇ ನಿಮ್ಮ ಇಲಾಖೆಗಳಲ್ಲಿ ಭ್ರಷ್ಟಾಚಾರ ತೀರಾ ಹೆಚ್ಚಾಗಿದೆ. ಒಂದೊಂದು ಇಲಾಖೆಗಳೂ ರೇಡ್ ಕಾರ್ಡ್ ಇಟ್ಟುಕೊಂಡಿವೆ ಎಂದು ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಎಕ್ಸ್ ಪೋಸ್ಟ್ ಮೂಲಕ ಬೇಸರ ಹೊರಹಾಕಿದ್ದಾರೆ.
ಕೈಗಾರಿಕೆ ಅನುಮೋದನೆಗೆ ಕಾಲಮಿತಿ, ಹೂಡಿಕೆದಾರರಿಗೆ ಸಮಸ್ಯೆ ತಪ್ಪಿಸಲು ಏಕಗವಾಕ್ಷಿ ಯೋಜನೆಯಡಿ ಅನುಮೋದನೆಗೆ ರಾಜ್ಯ ಸರ್ಕಾರ ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ನೆರೆಯ ರಾಜ್ಯಗಳಲ್ಲಿ ಅನುಮೋದನೆ ಸಿಗುತ್ತಿರುವ ಬಗ್ಗೆ ಅಧ್ಯಯನಕ್ಕೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಉದ್ಯಮಿ ಪೈ ಸಲಹೆಯನ್ನೂ ನೀಡಿದ್ದಾರೆ.
ಮುಖ್ಯಮಂತ್ರಿಗಳೇ ನಿಮ್ಮ ಯೋಚನೆಗೆ ಧನ್ಯವಾದಗಳು. ಆದ್ರೆ ಅಧಿಕಾರಿಗಳು ಸಹ ನಂತರ ಅನುಮೋದನೆ ನೀಡಬೇಕಾಗಿರೋದ್ರಿಂದ ಏಕಗವಾಕ್ಷಿ ಯೋಜನೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಏಕೆಂದ್ರೆ ಇಲಾಖೆಗಳಲ್ಲಿ ಭ್ರಷ್ಟಾಚಾರ ತೀರಾ ಹೆಚ್ಚಾಗಿದೆ. ಒಂದೊಂದು ಇಲಾಖೆಯಲ್ಲಿಯೂ ರೇಟ್ ಕಾರ್ಡ್ ಇಟ್ಟುಕೊಂಡಿದ್ದಾರೆ. ಆದ್ದರಿಂದ ದಯವಿಟ್ಟು ಆಂಧ್ರಪ್ರದೇಶದ ಮಾದರಿಯಲ್ಲಿ ಸೆಲ್ಫ್ ಸರ್ಟಿಫಿಕೇಟ್ ಸಿಗುವಂತೆ (ಸ್ವಯಂ ಪ್ರಮಾಣೀಕರಣಗಳ ಮೇಲೆ ಅನುಮೋದನೆಯನ್ನು ಸ್ವಯಂಚಾಲಿತವಾಗಿ ಮಾಡಿ) ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಿ ಅಂತ ಮನವಿ ಮಾಡಿದ್ದಾರೆ.
ಏಕಗವಾಕ್ಷಿ ಯೋಜನೆ ಅಂದ್ರೆ ಏನು?
ಏಕಗವಾಕ್ಷಿ ಯೋಜನೆ ಎಂದರೆ ಉದ್ಯಮಗಳು ಅಥವಾ ಇತರ ಸೇವೆಗಳನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಅನುಮೋದನೆಗಳು ಮತ್ತು ನೋಂದಣಿಯನ್ನು ಒಂದೇ ಸ್ಥಳದಲ್ಲಿ ಅಥವಾ ಒಂದೇ ಪೋರ್ಟಲ್ ಮೂಲಕ ಒದಗಿಸುವ ವ್ಯವಸ್ಥೆಯಾಗಿದೆ.



