– ಗುಲಾಬಿ ಕೆಜಿಗೆ ಕೇವಲ 10 ರೂಪಾಯಿ
ಚಿಕ್ಕಬಳ್ಳಾಪುರ: ಹಬ್ಬ ಹರಿದಿನ, ಮದ್ವೆ ಸೇರಿದಂತೆ ಯಾವುದೇ ಶುಭಸಮಾರಂಭಗಳಿದ್ರೆ ಹೂಗಳಿಗೆ (Flowers) ಸಹಜವಾಗಿಯೇವ ಭಾರೀ ಬೇಡಿಕೆ ಇರಲಿದೆ. ಆದ್ರೆ ಈಗ ಪಿತೃ ಪಕ್ಷದ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳು ಸಂಪೂರ್ಣ ನಿಲ್ ಆಗಿವೆ. ಹಾಗಾಗಿಯೇ ಈಗ ಫಲಪುಷ್ಪಗಿರಿಧಾಮದ ನಾಡು ಚಿಕ್ಕಬಳ್ಳಾಪುರದಲ್ಲಿ (Chikkaballapura) ಹೂ ಬೆಳೆದ ರೈತರು ಈಗ ಬೆಳೆದ ಹೂಗಳನ್ನ ತಿಪ್ಪೆಗೆ ಬಿಸಾಡುವಂತಾಗಿದೆ. ಪಿತೃ ಪಕ್ಷದಿಂದ ರೈತರಿಗೂ ಹಾಗೂ ವರ್ತಕರಿಗೂ ನಷ್ಟ ಎಂಬಂತಾಗಿದೆ.
ವರ್ತಕರಿಗೂ ಸಂಕಷ್ಟ:
ಚಿಕ್ಕಬಳ್ಳಾಪುರ ಫಲಪುಷ್ಪದಗಿರಿಧಾಮದ ನಾಡು ಎಂಬ ಪ್ರಖ್ಯಾತಿ ಪಡೆದುಕೊಂಡಿದೆ. ಇಲ್ಲಿನ ರೈತರು ಹಗಲು ರಾತ್ರಿ ನಿದ್ದೆ ಬಿಟ್ಟು ತರಹೇವಾರಿ ಹೂಗಳನ್ನ ಬೆಳೀತಾರೆ. ಆದ್ರೆ ಈಗ ಈ ಹೂಗಳನ್ನ ಖರೀದಿಸುವವರೇ ಇಲ್ಲ. ಇದಕ್ಕೆಲ್ಲಾ ಕಾರಣ ಪಿತೃ ಪಕ್ಷ. ಹೌದು. ಪಿತೃ ಪಕ್ಷ ಆರಂಭವಾಗಿದ್ದೇ ತಡ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಸಂಪೂರ್ಣ ನಿಂತು ಹೋಗಿದೆ. ರೈತರು (Farmers) ಬೆಳೆದ ಹೂಗಳನ್ನ ಕಷ್ಟಪಟ್ಟು ಮಾರುಕಟ್ಟೆಗೆ ತಂದರೂ ಕೇಳೋರೆ ಇಲ್ಲದಂತಾಗಿದೆ. ಪಿತೃ ಪಕ್ಷದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯೋದಿಲ್ಲ ಹಾಗಾಗಿ ಹೂಗಳಿಗೂ ಬೇಡಿಕೆ ಇರೋದಿಲ್ಲ. ಇದ್ರಿಂದ ಹೂ ಬೆಳೆದ ರೈತರು ತೋಟದಲ್ಲೇ ಹಾಗೆ ಬಿಟ್ರೆ ತೋಟ ಹಾಳಾಗಲಿದೆ. ಬಂದಷ್ಟು ಕಾಸು ಬರಲಿ ಅಂತ ಮಾರುಕಟ್ಟೆಗೆ ತಂದರೆ ಖರೀದಿಸೋವರು ಇಲ್ಲ. ಹೀಗಾಗಿ ಮಾರುಕಟ್ಟೆಯಲ್ಲೇ ಸುಖಾಸುಮ್ಮನೆ ಬಿಸಾಡಿ ಹೋಗುವಂತಾಗಿದೆ ಅಂತ ರೈತರು ಹಾಗೂ ವರ್ತಕರು ಅಳಲು ತೋಡಿಕೊಂಡಿದ್ದಾರೆ.
ಗುಲಾಬಿ ಕೆಜಿಗೆ ಕೇವಲ 10 ರೂಪಾಯಿ.
ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಿಂದ ರಾಜ್ಯ ಅಷ್ಟೇ ಅಲ್ಲದೆ ನೆರೆಯ ಆಂಧ್ರ, ತೆಲಂಗಾಣಕ್ಕೆ ಹೂಗಳನ್ನ ರಫ್ತು ಮಾಡಲಾಗುತ್ತಿತ್ತು. ಚಿಕ್ಕಬಳ್ಳಾಪುರದ ರೈತರು ಬಣ್ಣ ಬಣ್ಣದ ಗುಲಾಬಿ ಹೂಗಳು ಸೇರಿದಂತೆ ತರಹೇವಾರಿ ತಳಿಯ ಸೇವಂತಿಗೆ ಹೂಗಳನ್ನ ಬೆಳೀತಾರೆ. ಆದ್ರೆ ಈಗ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಗುಲಾಬಿ ಹೂ ಕೆಜಿಗೆ ಕೇವಲ 10 ರೂಪಾಯಿ ಮಾತ್ರ, ಇನ್ನೂ ಮೊದಲ ಹೊಸ ತೋಟದ ಸೇವಂತಿಗೆ ಹೂ ಕೆಜಿಗೆ ಗರಿಷ್ಟ ಅಂದ್ರೆ 50 ರೂಪಾಯಿ ಮಾತ್ರ, ಇನ್ನೂ ಚೆಂಡು ಹೂ ಅಂತೂ ಕೇಳೋರೆ ಇಲ್ಲ. ಹೀಗಾಗಿ ರೈತರಿಗೂ ಒಂದು ಕಡೆ ನಷ್ಠ ಮತ್ತೊಂದು ಕಡೆ ವ್ಯಾಪಾರ ವಹಿವಾಟು ಇಲ್ಲದೆ ವರ್ತಕರಿಗೂ ನಷ್ಟ ಎಂಬಂತಾಗಿದೆ. ಪಿತೃಪಕ್ಷದಿಂದ ಶುಭಸಮಾರಂಭಗಳಿಲ್ಲದೇ ರೈತರು ಮತ್ತು ವ್ಯಾಪಾರಿಗಳಿಗೆ ನಷ್ಟದ ದಿನಗಳು ಎಂಬಂತಾಗಿದ್ದು, ದಸರಾ, ದೀಪಾವಳಿ ಬಂದ ಮೇಲೆ ಹೂವಿನ ವ್ಯಾಪಾರ ಚೇತರಿಸಿಕೊಳ್ಳಬಹುದು ಎಂಬ ನೀರಿಕ್ಷೆ ಭರವಸೆ ಇದ್ದು ಪಿತೃ ಪಕ್ಷ ಅದ್ಯಾವಾಗ ಮುಗಿಯುತ್ತೋ ಅಂತ ರೈತರು ವರ್ತಕರು ಕಾಯುವಂತಾಗಿದೆ.