Connect with us

Crime

ಬೆಂಗ್ಳೂರಿನಿಂದ ಹೋಗ್ತಿದ್ದ ಬಸ್ಸಿಗೆ ಟ್ರಕ್ ಡಿಕ್ಕಿ- 19 ಮಂದಿ ದುರ್ಮರಣ

Published

on

– ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
– 14 ಮಂದಿ ಪುರುಷರು, 5 ಮಂದಿ ಮಹಿಳೆಯರು ಮೃತರು

ಚೆನ್ನೈ: ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 19 ಮಂದಿ ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವಿನಾಶಿಯಲ್ಲಿ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿನ ಹೆದ್ದಾರಿಯಲ್ಲಿ ಇಂದು ಮುಂಜಾನೆ 4.30ಕ್ಕೆ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 23 ಮಂದಿ ಗಾಯಗೊಂಡಿದ್ದು, ಅವರನ್ನು ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳ ರಾಜ್ಯಕ್ಕೆ ಸೇರಿದ ಸರ್ಕಾರಿ ವೋಲ್ವೋ ಬಸ್ ಕರ್ನಾಟಕದ ಬೆಂಗಳೂರಿನಿಂದ ತಿರುವನಂತಪುರಕ್ಕೆ ಹೋಗುತ್ತಿತ್ತು. ಕೊಯಮತ್ತೂರು-ಸೇಲಂ ಹೆದ್ದಾರಿಯಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಟ್ರಕ್ ವೇಗವಾಗಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 19 ಮಂದಿ ಮೃತಪಟ್ಟಿದ್ದು, 23 ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೋಲ್ಟೋ ಬಸ್ಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು. ಸಾಕಷ್ಟು ಪ್ರಯಾಣಿಕರು ಆನ್‍ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಅಪಘಾತದಲ್ಲಿ ಮೃತಪಟ್ಟವರು ಪಾಲಕ್ಕಾಡ್, ತ್ರಿಶೂರ್ ಮತ್ತು ಎರ್ನಾಕುಲಂ ಮೂಲದವರು ಎಂದು ಕೇರಳ ಸಾರಿಗೆ ಸಚಿವ ಎ.ಕೆ ಸಸೀಂದ್ರನ್ ಹೇಳಿದ್ದಾರೆ.

ತಿರುಪುರ ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪುರುಷರು ಮತ್ತು 5 ಮಂದಿ ಮಹಿಳೆಯರು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ. ಟ್ರಕ್ ನಿಯಮ ಉಲ್ಲಂಘಿಸಿ ತಪ್ಪಾದ ಹಾದಿಯಲ್ಲಿ ಚಲಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಆತನಿಗೆ ಹುಡುಕಾಟ ನಡೆಯುತ್ತಿದೆ ಎಂದು ಅವಿನಾಶಿಯ ಉಪ ತಹಶೀಲ್ದಾರ್ ಹೇಳಿದ್ದಾರೆ.

ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಅನಿವಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಮೃತರನ್ನು ಗುರುತಿಸುವ ಕಾರ್ಯಚರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಭೀಕರ ಅಪಘಾತದ ಬಗ್ಗೆ ತಿಳಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ತಮಿಳುನಾಡು ಸರ್ಕಾರ ಮತ್ತು ತಿರುಪುರದ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಮೃತ ಕುಟುಂಬದವರಿಗೆ ಎಲ್ಲ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಜೊತೆಗೆ ಅಪಘಾತದಲ್ಲಿ ಗಾಯಗೊಂಡಿರುವವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *