ಧಾರವಾಡ: ಸುಮಾರು 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್‍ವೊಂದು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬರು ಸಾವನ್ನಪ್ಪಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಪ್ರಭುನಗರ ಹೊನ್ನಾಪೂರ ಬಳಿ ಸಂಭವಿಸಿದೆ.
ಖಾಸಗಿ ಬಸ್ ಮುಂಜಾನೆ ಸುಮಾರು 5 ಗಂಟೆಗೆ ಬೆಂಗಳೂರಿನಿಂದ ಗೋವಾ ಕಡೆಗೆ ಹೊರಟಿತ್ತು. ಬಸ್‍ನಲ್ಲಿ ಇಬ್ಬರು ಚಾಲಕರಿದ್ದರು. ಒಬ್ಬ ಮಲಗಿದ್ದು, ಮತ್ತೊಬ್ಬ ಚಾಲಕ ಬಸ್ ಓಡಿಸುತ್ತಿದ್ದರು. ಹೊನ್ನಾಪೂರಯ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಇದರ ಪರಿಣಾಮ ಪ್ರಯಾಣಿಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸದ್ಯಕ್ಕೆ ಮೃತರ ಗುರುತು ಪತ್ತೆಯಾಗಿಲ್ಲ. 6 ಜನರ ಸ್ಥಿತಿ ಗಂಭೀರವಾಗಿದ್ದು, ಒಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಮೀಪದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ದೂರನ್ನು ದಾಖಲಿಸಿಕೊಂಡು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.