ಶಿವಮೊಗ್ಗ: ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ವಾಪಸ್ ಹೋಗುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‍ನಲ್ಲಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕು ಅರಬಿಳಚಿ ಬಳಿ ನಡೆದಿದೆ.
ಹರಿಕೃಷ್ಣ(45) ಮೃತ ಶಿಕ್ಷಕ. ಭದ್ರಾವತಿ ತಾಲೂಕಿ ಮಾರಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ಪ್ರವಾಸ ಮುಗಿಸಿ ವಾಪಸ್ ಬಂದಿದ್ದರು. ಮಾರಶೆಟ್ಟಿಹಳ್ಳಿಯಲ್ಲಿ ಕೆಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ, ಇಬ್ಬರು ವಿದ್ಯಾರ್ಥಿಗಳನ್ನು ಅರಬಿಳಚಿ ಗ್ರಾಮಕ್ಕೆ ಇಳಿಸಿ ಬಸ್ ವಾಪಸ್ ಹೋಗುತ್ತಿತ್ತು. ಆದರೆ ಬಸ್ ಅರಬಿಳಚಿ ಹಾಗೂ ಕಲ್ಲಿಹಾಳ್ ರಸ್ತೆ ಮಧ್ಯೆ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮ ಬಸ್‍ನಲ್ಲಿದ್ದ ಶಾಲೆಯ ದೈಹಿಕ ಶಿಕ್ಷಕ ಹರಿಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಸ್ ಅಪಘಾತವಾಗುತ್ತಿದ್ದಂತೆಯೇ ಬಸ್ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.