ಶಿವಮೊಗ್ಗ: ಬೈಕ್ ಸವಾರನನ್ನು ತಪ್ಪಿಸಲು ಹೋಗಿ 35 ಮಂದಿ ಪ್ರಯಾಣಿಕರಿದ್ದ ಕೆಎಸ್‍ಆರ್ ಟಿಸಿ ಬಸ್ ಪಲ್ಟಿಯಾಗಿ ಕೆರೆಗೆ ಉರುಳಿ ಬಿದ್ದಿರುವ ಘಟನೆ ಶಿವಮೊಗ್ಗ ಹೊನ್ನಾಳಿ ಹೆದ್ದಾರಿಯಲ್ಲಿರುವ ಬೇಡರಹೊಸಳ್ಳಿ ಬಳಿ ಸಂಭವಿಸಿದೆ.
ಧರ್ಮಸ್ಥಳದಿಂದ-ಯಲಬುರ್ಗಾಕ್ಕೆ ಹೊರಟಿದ್ದ ಈ ಬಸ್‍ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರು ಇದ್ದರು. ಆದರೆ ಬೇಡರಹೊಸಳ್ಳಿ ಬಳಿ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾರೆ. ಬೈಕ್ ಸವಾರನನ್ನು ತಪ್ಪಿಸುವ ಪ್ರಯತ್ನದಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆರೆಗೆ ಉರುಳಿ ಬಿದ್ದಿದೆ. ಕೆರೆಯಲ್ಲಿ ನೀರು ಕಡಿಮೆ ಇದಿದ್ದದ್ದರಿಂದ ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.
ಉರುಳಿ ಬಿದ್ದ ಬಸ್ ನ ಕಿಟಕಿ ಗ್ಲಾಸುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಈ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.