ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

Public TV
1 Min Read
bus driver

ಲಕ್ನೋ: ಉತ್ತರ ಪ್ರದೇಶದ ನೊಯ್ದಾದ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಸಾರಿಗೆ ಇಲಾಖೆ 500 ರೂ. ದಂಡದ ಚಲನ್ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

ಸೆಪ್ಟೆಂಬರ್ 11ರಂದು ಆನ್‍ಲೈನ್ ಮೂಲಕ ಚಲನ್ ಕಳುಹಿಸಲಾಗಿದ್ದು, ನಮ್ಮ ಸಹೋದ್ಯೋಗಿಯೊಬ್ಬರು ಶುಕ್ರವಾರ ಇದನ್ನು ಪರಿಶೀಲಿಸಿದ್ದಾರೆ ಎಂದು ಬಸ್ ಮಾಲೀಕ ನಿರಂಕರ್ ಸಿಂಗ್ ಹೇಳಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ದಂಡ ಪಾವತಿಸುವುದಾಗಿಯೂ ಸಿಂಗ್ ತಿಳಿಸಿದ್ದಾರೆ.

bus driver 3

ನಮ್ಮ ಬಸ್‍ಗಳು ನಗರ ಸಾರಿಗೆಯಾಗಿದ್ದು, ಬಸ್ ವ್ಯವಹಾರವನ್ನು ನಮ್ಮ ಮಗ ನೋಡಿಕೊಳ್ಳುತ್ತಾನೆ. ನಮ್ಮ ಬಳಿ 40-50 ಬಸ್‍ಗಳಿವೆ, ಶಾಲೆಗಳಿಗೆ ಹಾಗೂ ವಿವಿಧ ಕಂಪನಿಗಳಿಗೆ ಬಸ್‍ಗಳನ್ನು ಬಾಡಿಗೆಗೆ ನೀಡಲಾಗಿದೆ. ಇವು ನೊಯ್ಡಾ ಹಾಗೂ ಗ್ರೇಟರ್ ನೊಯ್ಡಾದಲ್ಲಿ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಜವಾಬ್ದಾರಿಯುತ ಇಲಾಖೆ ಇಂತಹ ಸಣ್ಣ ತಪ್ಪುಗಳನ್ನು ಮಾಡಿದರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ ನಿತ್ಯ ಸಾರಿಗೆ ಇಲಾಖೆ ಇಂತಹ ಅನಗತ್ಯ ಚಲನ್‍ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Police Jeep

ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಅಗತ್ಯವಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲಿಸಲಾಗುತ್ತಿದೆ, ದೋಷವಾಗಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಹೊಸ ಮೋಟಾರ್ ವಾಹನ ಕಾಯ್ದೆಯ ನಿಯಮದಂತೆ ಚಲನ್ ನೀಡಲಾಗಿದೆ.

ಈ ಚಲನ್‍ನ್ನು ನೋಯ್ಡಾ ಟ್ರಾಫಿಕ್ ಪೊಲೀಸರು ನೀಡಿಲ್ಲ. ಬದಲಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದಾರೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಈ ಹಿಂದೇ ಅದೇ ಬಸ್‍ಗೆ ನಾಲ್ಕು ಬಾರಿ ದಂಡ ವಿಧಿಸಲಾಗಿತ್ತು. ಈ ಬಾರಿಯೂ ಸೀಟ್ ಬೆಲ್ಟ್ ಅಪರಾಧವಾಗಿದ್ದರೆ ಚಲನ್‍ನಲ್ಲಿ ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಉಲ್ಲೇಖಿಸಬೇಕು, ಹೆಲ್ಮೆಟ್ ಧರಿಸದ್ದಕ್ಕೆ ಎಂದಲ್ಲ ಎಂದು ನಿರಂಕರ್ ಸಿಂಗ್ ವಾದಿಸಿದ್ದಾರೆ. ನಮ್ಮ ಕಡೆಯಿಂದ ಏನಾದರೂ ದೋಷವಿದ್ದರೆ, ನಾವು ದಂಡವನ್ನು ಪಾವತಿಸುತ್ತೇವೆ. ಆದರೆ ಅದು ನಿಜವಾಗಿರಬೇಕು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *