ಮಂಡ್ಯ: ಜಿಲ್ಲೆಯ ಪಾಂಡವಪುರದ ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿ ಚಾಲಕ ಶಿವಣ್ಣ ಪೊಲೀಸರ ತನಿಖೆ ವೇಳೆ ಅಪಘಾತಕ್ಕೆ ಕಾರಣವನ್ನು ತಿಳಿಸಿದ್ದಾನೆ.
ಚಾಲಕ ಹೇಳಿದ್ದು ಏನು?
ಕನಗನಮರಡಿ ನಾಲೆಯ ಬಳಿ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿತು. ಆಗ ಬಸ್ ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ನಾನು ಅದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೆ ದುರದೃಷ್ಟಾವಶಾತ್ ಬಸ್ ನಾಲೆಗೆ ಉರುಳಿಬಿತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
ನವೆಂಬರ್ 24 ರಂದು ವಿಸಿ ನಾಲೆಗೆ ಬಸ್ ಬಿದ್ದ ಪರಿಣಾಮ 30 ಜನ ಮೃತಪಟ್ಟಿದ್ದರು. ಅಂದಿನಿಂದ ಬಸ್ ಚಾಲಕ ಶಿವಣ್ಣ ತಲೆಮರೆಸಿಕೊಂಡಿದ್ದನು. ಪೊಲೀಸರು ಈ ಕುರಿತು ತನಿಖೆ ಶುರುಮಾಡಿದ್ದು, ಭಾನುವಾರ ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಚಾಲಕನನ್ನು ವಿಚಾರಣೆಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
30 ಜನರನ್ನು ಬಲಿ ಪಡೆದ ಕನಗನಮರಡಿ ಬಸ್ ದುರಂತದ ನಂತರ ಸರ್ಕಾರ ಎಚ್ಚೆತ್ತುಕೊಂಡಿದ್ದು, ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ ತಡೆಗೋಡೆ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೇ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ ಅಪಘಾತ ನಡೆದ ಮಾರನೇ ದಿನದಿಂದಲೇ ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರವನ್ನು ಆರಂಭಿಸಿದೆ. ಸದ್ಯ ಗ್ರಾಮದ ಮಾರ್ಗವಾಗಿ ದಿನಕ್ಕೆ ನಾಲ್ಕು ಬಾರಿ ಸರ್ಕಾರಿ ಬಸ್ ಸಂಚಾರ ನಡೆಸುತ್ತಿದೆ.
ಪಾರಾಗಿದ್ದು ಹೇಗೆ?
ಬಸ್ ಅಪಘಾತದಲ್ಲಿ ತಾನು ಬದುಕುಳಿದ ಬಗ್ಗೆ ಚಾಲಕ ಮಾಹಿತಿ ನೀಡಿದ್ದಾನೆ. ನನಗೂ ಈಜು ಬರುತ್ತಿರಲಿಲ್ಲ. ಸ್ಥಳೀಯರಾದ ಅಂಕೇಗೌಡ ಎಂಬವವರು ನನ್ನನ್ನು ರಕ್ಷಿಸಿದ್ದರು. ಸುಸ್ತಾಗಿದ್ದ ನನ್ನನ್ನು ಜಮೀನಿನ ಬಳಿ ಕೂರಿಸಿದ್ದರು. ಈ ವೇಳೆ ನಡೆದುಕೊಂಡೇ ಬಸರಾಳು ಗ್ರಾಮಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗಿ ತಲೆಮರೆಸಿಕೊಂಡಿದ್ದಾಗಿ ಚಾಲಕ ಶಿವಣ್ಣ ತಿಳಿಸಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv