ಶಿವಮೊಗ್ಗ: ಬೈಕ್ ಹಾಗೂ ಮದುವೆ ದಿಬ್ಬಣದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂಡಲ ವಿಠಲಾಪುರ ಬಳಿ ಸಂಭವಿಸಿದೆ.
ವೀರಪ್ಪ (45), ಆಶಾ (34) ಮತ್ತು ಹೇಮಂತ್ (7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತಪಟ್ಟವರು ಭದ್ರಾವತಿ ತಾಲೊಕಿನ ಹನುಮಂತಾಪುರ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಗರ್ಭಿಣಿ ಪತ್ನಿಯ ಆರೋಗ್ಯ ತಪಾಸಣೆಗಾಗಿ ಪತಿ ವೀರಪ್ಪ ಹಾಗೂ ದಂಪತಿಯ ಪುತ್ರ ಬೈಕಿನಲ್ಲಿ ಹೊಳೆಹೊನ್ನೂರಿಗೆ ತೆರಳುತ್ತಿದ್ದರು. ಶಿವಮೊಗ್ಗದಲ್ಲಿ ಮದುವೆ ಸಮಾರಂಭ ಮುಗಿಸಿಕೊಂಡು ಗುಡುಮಘಟ್ಟಕ್ಕೆ ಬಸ್ ವಾಪಸ್ ತೆರಳುತಿತ್ತು. ಆದರೆ ಮೂಡಲ ವಿಠಲಾಪುರ ಬಳಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಪತಿ, ಪತ್ನಿ ಮತ್ತು ಮಗ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಗೆ ಬಸ್ ಚಾಲಕನ ಅಜಾಗರೂಕತೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಘಟನೆ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.