Bengaluru City
ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ರು!

ಬೆಂಗಳೂರು: ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆನೇಕಲ್ ತಾಲೂಕಿನ ಹಂದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಅಯ್ಯಪ್ಪ ರೆಡ್ಡಿ ಸಾಲ ತೀರಿಸುವ ಸಲುವಾಗಿ ತಮ್ಮ 39 ಗುಂಟೆ ಜಮೀನನ್ನು 80 ಲಕ್ಷಕ್ಕೆ ಮಾರಿದ್ರು. ಇದಾದ ಮೂರೇ ದಿನದಲ್ಲಿ ಅಂದ್ರೆ ಜುಲೈ 31ರಂದು ಸಾವನ್ನಪ್ಪಿದ್ರು.
ಶವ ಸಂಸ್ಕಾರದವರೆಗೂ ಸುಮ್ಮನಿದ್ದ ಸಹೋದರ ರಾಮಕೃಷ್ಣ ರೆಡ್ಡಿ ಇದೀಗ ಅಣ್ಣನನ್ನು ಕೊಲೆ ಮಾಡಲಾಗಿದೆ ಅಂತ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಅತ್ತಿಗೆ ಕಾಳಮ್ಮ ಮತ್ತು ಜಮೀನು ಖರೀದಿಸಿದವರೇ ಅಯ್ಯಪ್ಪ ರೆಡ್ಡಿ ಸಾವಿಗೆ ಕಾರಣ ಅಂತ ಆರೋಪಿಸಿದ್ದಾರೆ.
ಆದ್ರೆ ಅಯ್ಯಪ್ಪ ಪತ್ನಿ ಕಾಳಮ್ಮ ನಮಗೆ ಕಿರುಕುಳ ನೀಡಲೆಂದೇ ರಾಮಕೃಷ್ಣರೆಡ್ಡಿ ಈ ರೀತಿ ದೂರು ನೀಡಿದ್ದಾರೆ ಅಂತ ಆರೋಪಿಸಿದ್ದಾರೆ. ಹೀಗಾಗಿ ಮಂಗಳವಾರ ಉಪವಿಭಾಗಾಧಿಕಾರಿ ಹರೀಶ್ ನೇತೃತ್ವದಲ್ಲಿ ಅಯ್ಯಪ್ಪ ರೆಡ್ಡಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
