ಲಂಡನ್: ಇಂಗ್ಲೆಂಡ್ ವಿರುದ್ಧ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಭಾರೀ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಬೌಲರ್ ಜಸ್‍ಪ್ರೀತ್ ಬುಮ್ರಾ ಹಾಗೂ ಯುವ ಆಟಗಾರ ವಾಷಿಂಗ್ಟನ್ ಸುಂದರ್ ಟಿ20 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಫೀಲ್ಡಿಂಗ್ ವೇಳೆ ಬುಮ್ರಾ ಬಲಗೈ ಹೆಬ್ಬೆರಳಿಗೆ ಗಾಯವಾಗಿದೆ. ಇದರಿಂದ ಅವರು ಇಂಗ್ಲೆಂಡ್ ಟೂರ್ನಿಯ ಮೂರು ಪಂದ್ಯಗಳ ಟಿ20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಟೀಂ ಇಂಡಿಯಾ ಪಾಲಿಗೆ ಪ್ರಮುಖ ಡೆತ್ ಬೌಲರ್ ಆಗಿದ್ದ ಬುಮ್ರಾ ಗಾಯದ ಸಮಸ್ಯೆಯಿಂದ ಗುರುವಾರ ತರಬೇತಿಗೆ ಹಾಜರಾಗಿರಲಿಲ್ಲ, ಅಲ್ಲದೇ ಐರ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿಯೂ ಕಣಕ್ಕೆ ಇಳಿದಿರಲಿಲ್ಲ.
ಸದ್ಯ ಬುಮ್ರಾ ಐಸಿಸಿ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದು, ಟೀಂ ಇಂಡಿಯಾ ಪರ ಯಜುವೇಂದ್ರ ಚಹಲ್, ಬುಮ್ರಾ ಮಾತ್ರ ಮೊದಲ 10 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಸದ್ಯ ಗಾಯದ ಸಮಸ್ಯೆಯಿಂದ ಜುಲೈ 12 ರಂದು ಆರಂಭವಾಗುವ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಗಳಿಗೂ ಮುನ್ನ ಗುಣಮುಖರಾಗುವ ಸಾಧ್ಯತೆ ಇದೆ. ಉಳಿದಂತೆ ಟಿ20, ಏಕದಿನ ಟೂರ್ನಿ ಬಳಿಕ ಆಗಸ್ಟ್ 1 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಇನ್ನು ಸುಂದರ್ ಬಲ ಮೊಣಕಾಲಿಗೆ ಗಾಯವಾಗಿದ್ದು, ಐರ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೂ ಮುನ್ನ ನಡೆದ ತರಬೇತಿ ಫುಟ್ಬಾಲ್ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಸದ್ಯ ಇಬ್ಬರ ಆಟಗಾರರ ಸ್ಥಾನದಲ್ಲಿ ಶರ್ದುಲ್ ಠಾಕೂರ್ ಹಾಗೂ ದೀಪಕ್ ಠಾಕೂರ್ ಅವರ ಹೆಸರನ್ನು ಬಿಸಿಸಿಐ ಸೂಚಿಸುವ ಸಾಧ್ಯತೆ ಇದೆ.