ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam) ಉಗ್ರರು ಅಟ್ಟಹಾಸ ನಡೆಸಿದ್ದರು. ಸುಂದರ ತಾಣದಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ನೆತ್ತರು ಹರಿಸಿದ್ದರು ಪಾಕ್ ಉಗ್ರರು. ಇದಕ್ಕೆ ಹೆಜ್ಜೆ-ಹೆಜ್ಜೆಗೂ ದಿಟ್ಟ ಉತ್ತರ ನೀಡುತ್ತಲೇ ಬಂದಿದ್ದ ಭಾರತೀಯ ಸೇನೆ, ಪ್ರತೀಕಾರಕ್ಕಾಗಿ ಕಾಯುತ್ತಲೇ ಇತ್ತು. ಕೊನೆಗೂ ಸಿಕ್ಕ ಸಮಯ ಬಳಸಿಕೊಂಡ ಭಾರತೀಯ ಸೇನೆ (Indian Army) ನರಮೇಧ ನಡೆಸಿದ್ದ ಪಾತಕಿಗಳನ್ನು ಹತ್ಯೆಗೈದಿದೆ. ಶ್ರೀನಗರದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್ ಮಹಾದೇವ್ʼ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹತ್ಯೆಗೈದಿತು.
ಉಗ್ರರ ಹತ್ಯೆ ಬಳಿಕ ಅಲ್ಲಿದ್ದ ರೈಫಲ್, ಬುಲೆಟ್ (Bullet), ವೋಟರ್ ಐಡಿ ಹಾಗೂ ಸ್ಥಳದಲ್ಲಿ ಸಿಕ್ಕ ಚಾಕ್ಲೆಟ್ ಗುರುತುಗಳನ್ನಾಧರಿಸಿ ಹತ್ಯೆಯಾದವರು ಪಾಕ್ ಉಗ್ರರೇ ಅನ್ನೋದನ್ನ ಖಚಿತಪಡಿಸಿಕೊಳ್ಳಲಾಯಿತು. ಆದ್ರೆ ರೈಫಲ್, ಬುಲೆಟ್ ಶೆಲ್‌ಗಳನ್ನ ದಾಳಿಗೆ ಸಂಬಂಧಿಸಿದ್ದೇ ಅಂತ ಕಂಡುಹಿಡಿಯಲು ತಜ್ಞರು ಯಾವ ರೀತಿಯ ಪರೀಕ್ಷೆಗಳನ್ನ ನಡೆಸುತ್ತಾರೆ ಅನ್ನೋ ಕುತೂಹಲ ಇದ್ದೇ ಇರುತ್ತೆ. ಅದಕ್ಕೆ ಉತ್ತರ ಇಲ್ಲಿದೆ… ಪ್ರಮುಖ ಅಪರಾಧಗಳಲ್ಲಿ ರೈಫಲ್, ಕಾಟ್ರಿಜ್ ಕೇಸ್‌ಗಳನ್ನ (cartridge case) ಯಾವ ರೀತಿ ಪರೀಕ್ಷೆಗೆ ಒಳಪಡಿಸಲಾಗುತ್ತೆ? ಬುಲೆಟ್‌ನಲ್ಲಿ ಒಂದು ರೈಫಲ್‌ನಿಂದ ಬುಲೆಟ್ ಹಾರಿದ ನಂತರ ಯಾವೆಲ್ಲ ಸೂಕ್ಷ್ಮ ಗುರುತುಗಳು ಸಿಗುತ್ತವೆ? ರೈಫಲ್‌ನಲ್ಲಿ ಆಗುವ ಬದಲಾವಣೆಗಳೇನು? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಅದಕ್ಕೂ ಮುನ್ನ ಅಮಿತ್ ಶಾ ಅವರು ಲೋಕಸಭೆಯಲ್ಲಿ ಏನ್ ಹೇಳಿದ್ರು ಅನ್ನೋದನ್ನ ತಿಳಿಯೋಣ…
ಅಮಿತ್ ಶಾ ಹೇಳಿದ್ದೇನು?
ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜೆ & ಕೆ ಪೊಲೀಸರು ನಡೆಸಿದ ಜಂಟಿ ಆಪರೇಷನ್ ಮಹಾದೇವ (Operation MAHADEV) ಕಾರ್ಯಾಚರಣೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) ನರಮೇಧ ನಡೆಸಿದ ಉಗ್ರರನ್ನ ಹತ್ಯೆಗೈಯಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಭದ್ರತಾ ಪಡೆಗಳು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈದಿವೆ. ಪಹಲ್ಗಾಮ್ ದಾಳಿಗೆ ಭಾರತದ ಪ್ರತೀಕಾರ ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಈ ಉಗ್ರರು ಅಡಗುತಾಣಗಳನ್ನು ಬದಲಿಸಲು ನೆರವಾಗುತ್ತಿದ್ದ ಮತ್ತು ಅವರಿಗೆ ಆಹಾರ ಒದಗಿಸುತ್ತಿದ್ದವರನ್ನು ಈ ಮೊದಲೇ ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಆಧಾರದ ಮೇರೆಗೆ ಅವರ ಅಡಗುತಾಣದ ಖಚಿತ ಮಾಹಿತಿ ಪಡೆದು ದಾಳಿ ಮಾಡಲಾಗಿದೆ. ಬಂಧಿತರೇ ಈ ಮೂವರೂ ಉಗ್ರರ ಶವಗಳನ್ನು ಗುರುತಿಸಿದ್ದಾರೆ ಎಂದು ಲೋಕಸಭೆಗೆ ತಿಳಿಸಿದ್ದರು.
ಪಹಲ್ಗಾಮ್ ಪಾತಕಿಗಳೇ ಅನ್ನೋದು ಪತ್ತೆಯಾಗಿದ್ದು ಹೇಗೆ?
ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್ ಒಂದೇ ಅಂತ ಖಚಿತವಾಗಿದೆ. ಉಗ್ರರು ಹತ್ಯೆಯಾದ ಬೆನ್ನಲ್ಲೇ ಚಂಡೀಗಢಕ್ಕೆ ರೈಫಲ್ ಕಳಿಸಿ ದೃಢಪಡಿಸಲಾಯಿತು. ಪಹಲ್ಗಾಮ್ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ಉಗ್ರರ ರೈಫಲ್‌ನಲ್ಲಿ ಸಿಕ್ಕ ಗುಂಡು ಹಾರಿಸಿ ಖಚಿತಪಡಿಸಿಕೊಳ್ಳಲಾಯಿತು. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಅಂತ ಖಚಿತವಾಯಿತು. ಅಲ್ಲದೇ ಸತ್ತ ಇಬ್ಬರು ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಇತ್ತು. ಅಲ್ಲದೇ ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದಾಗಿತ್ತು. ಇದೆಲ್ಲದರ ಬಗ್ಗೆ ಅಮಿತ್ ಶಾ ವಿವರಣೆ ನೀಡಿದ್ದರು. ಇದಾದ ಕೆಲ ದಿನಗಳಲ್ಲೇ ಪಾಕಿಸ್ತಾನ ನೀಡಿದ ದಾಖಲೆ ಹಾಗೂ ಬಯೋಮೆಟ್ರಿಕ್ ದಾಖಲೆಗಳನ್ನ ಪರಿಶೀಲಿಸಿ ಪಹಲ್ಗಾಮ್ ದಾಳಿಕೋರರು ಪಾಕಿಸ್ತಾನದವರೇ ಅಂತ ಭದ್ರತಾ ಏಜೆನ್ಸಿ ದೃಢಪಡಿಸಿತು.
ಬ್ಯಾಲಿಸ್ಟಿಕ್ಸ್ ಮ್ಯಾಚಿಂಗ್ ಅಂದ್ರೆ ಏನು?
ಬ್ಯಾಲಿಸ್ಟಿಕ್ಸ್ (ಮದ್ದುಗುಂಡುಗಳ ಚಲನೆಯ ಅಧ್ಯಯನವನ್ನ ಬ್ಯಾಲಿಸ್ಟಿಕ್ಸ್ ಎನ್ನುತ್ತೇವೆ) ಹೊಂದಾಣಿಕೆ ಅಂದ್ರೆ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಬುಲೆಟ್ ಅಥವಾ ಕಾಟ್ರಿಜ್ ಕೇಸ್ ಅನ್ನು ಶಂಕಿತ ಬಂದೂಕಿನಿಂದ ಹಾರಿಸಲಾಗಿದೆಯೇ ಎಂದು ನಿರ್ಧರಿಸಲು ಬಳಸುವ ವಿಧಿವಿಜ್ಞಾನ ತಂತ್ರಜ್ಞಾನದ ಭಾಗ. ಈ ಪ್ರಕ್ರಿಯೆಯು ದೊಡ್ಡ ದೊಡ್ಡ ಅಪರಾಧ ಪ್ರಕರಣಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಾವುದೇ ರೈಫಲ್ ಅಥವಾ ಬಂದೂಕಿನಿಂದ ಗುಂಡು ಹಾರಿಸಿದಾಗ ಬುಲೆಟ್ ಮತ್ತು ಶೆಲ್‌ಗಳ ಮೇಲೆ ಕೆಲವೊಂದು ಸೂಕ್ಷ್ಮ ಗುರುತುಗಳು ಅಲ್ಲೇ ಉಳಿಯುತ್ತವೆ. ಅವುಗಳನ್ನು ವಿಶ್ಲೇಷಣೆ ಮಾಡುವ ಮೂಲಕ ವಿಧಿವಿಜ್ಞಾನ ತಜ್ಞರು ಬುಲೆಟ್ ಅಥವಾ ಕಾಟ್ರಿಜ್ ಇಂತಹದ್ದೇ ರೈಫಲ್‌ನಿಂದ ಬಂದಿದೆ ಎಂಬುದನ್ನ ಪತ್ತೆಹಚ್ಚುತ್ತಾರೆ.
ಏನೇನು ಪತ್ತೆ ಮಾಡಬಹುದು?
* ಬ್ಯಾರಲ್ ಮತ್ತು ಬುಲೆಟ್‌ಗಳ ಮೇಲೆ ಬಿಡಲಾದ ಕೈ ರೇಖೆಗಳು
* ಫೈರಿಂಗ್ ಪಿನ್, ಬ್ರೀಚ್ ಫೇಸ್, ಎಜೆಕ್ಟರ್ (ಕಾಟ್ರಿಜ್ ಕೇಸ್‌ನ ಗುರುತುಗಳನ್ನು ಹೊರತುಪಡಿಸಿ)
* ಬ್ಯಾಲಿಸ್ಟಿಕ್ಸ್ ತಜ್ಞರು ಈ ಗುರುತುಗಳನ್ನು ಪರಿಶೀಲಿಸಿ ಹಾಗೂ ಬುಲೆಟ್ ಅಥವಾ ಕಾಟ್ರಿಜ್ ಕೇಸನ್ನ ನಿರ್ದಿಷ್ಟ ಗನ್‌ನೊಂದಿಗೆ ಹೋಲಿಕೆ ಮಾಡುತ್ತಾರೆ.
ಬ್ಯಾಲಿಸ್ಟಿಕ್ಸ್ ಮ್ಯಾಚಿಂಗ್‌ನ ವಿಧಾನಗಳೇನು?
- Internal Ballistics (ಆಂತರಿಕ): ರೈಫಲ್‌ನಿಂದ ಬುಲೆಟ್ ಹಾರಿಸಿದಾಗ ಅದರೊಳಗೆ ಆಂತರಿಕೆ ಬದಲಾವಣೆ ಏನೆಲ್ಲಾ ಆಗುತ್ತದೆ ಅನ್ನೋದರ ಬಗ್ಗೆ ಪರಿಶೀಲಿಸುವುದು.
- External Ballistics (ಬಾಹ್ಯ): ರೈಫಲ್ ಅಥವಾ ಬಂದೂಕಿನಿಂದ ಹೊರಬಂದ ನಂತರ ಬುಲೆಟ್ ಹಾದುಹೋಗುವ ಮಾರ್ಗ ಅನುಸರಿಸುವುದು. (ಕೆಲವೊಮ್ಮೆ ಈ ವಿಧಾನ ಬಳಸುವುದಿಲ್ಲ)
- Terminal Ballistics (ಟರ್ಮಿನಲ್): ಬುಲೆಟ್ ನಿರ್ದಿಷ್ಟ ಗುರಿ ತಲುಪಿದಾಗ ಏನಾಗುತ್ತೆ? ಅನ್ನೋದನ್ನ ವಿಶ್ಲೇಷಣೆ ಮಾಡುವುದು. (ಗಾಯದ ವಿಶ್ಲೇಷಣೆಗೆ ಈ ವಿಧಾನ ಬಳಕೆ).
- Forensic Ballistics (ಫೊರೆನ್ಸಿಕ್ ಅಥವಾ ಟೂಲ್‌ಮಾರ್ಕ್ ವಿಶ್ಲೇಷಣೆ): ರೈಫಲ್‌ನಲ್ಲಿ ಉಳಿದ ಉಪಕರಣಗಳು ಅಥವಾ ಬಿಡಿಭಾಗಗಳ ಗುರುತುಗಳನ್ನು ವಿಶ್ಲೇಷಣೆ ಮಾಡುವುದು.
ಬುಲೆಟ್ ಹೊಂದಿಸಲು ಬ್ಯಾಲಿಸ್ಟಿಕ್ಸ್ ಪರೀಕ್ಷೆಗಳು ಹೇಗಿರಲಿವೆ?
* ಶಂಕಿತ ರೈಫಲ್‌ನ ಪರೀಕ್ಷೆ: ವಶಕ್ಕೆ ಪಡೆದ ರೈಫಲ್ ಅನ್ನು ಹೊಂದಾಣಿಕೆ ಮಾಡುವಾಗ ನಿಯಂತ್ರಿತ ವಾತಾವರಣದಲ್ಲಿ ಬುಲೆಟ್ ಫೈರಿಂಗ್ ಮಾಡಲಾಗುತ್ತದೆ. ನೀರಿನ ಟ್ಯಾಂಕರ್‌ಗಳಂತಹ ವಸ್ತುಗಳ ಮೇಲೆ ಇದನ್ನ ಪ್ರಯೋಗ ಮಾಡುತ್ತಾರೆ, ಇದರಿಂದ ಬುಲೆಟ್ ವಿರೂಪಗೊಳ್ಳುವುದನ್ನು ತಪ್ಪಿಸಬಹುದು.
* ಮೈಕ್ರೋಸ್ಕೋಪಿಕ್ ಮ್ಯಾಚಿಂಗ್: ಅಂದ್ರೆ ಡ್ಯುಯೆಲ್ ಲೆನ್ಸ್ ಮೈಕ್ರೋಸ್ಕೋಪ್ ಮಾದರಿ ಮತ್ತು ಸಂಗ್ರಹ ಮಾದರಿಗಳನ್ನ ಅಕ್ಕಪಕ್ಕದಲ್ಲಿ ತೋರಿಸುತ್ತದೆ. ಈ ಪರೀಕ್ಷೆ ಏಕಕಾಲದಲ್ಲಿ ಸೂಕ್ಷ್ಮ ಗುರುತುಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಜೊತೆಗೆ ಬುಲೆಟ್‌ನಿಂದಲೇ ಇದು ಯಾವ ಮಾದರಿಯ ರೈಫಲ್‌ಗೆ ಬಳಸಲಾಗುತ್ತದೆ ಎಂಬುದನ್ನು ತಿಳಿಯಬಹುದು. ಫೈರಿಂಗ್ ಪಿನ್, ಬ್ರೀಚ್ ಫೇಸ್, ಎಕ್ಸ್‌ಟ್ರಾಕ್ಟರ್ ಮತ್ತು ಎಜೆಕ್ಟರ್ ನಂತರ ಟೂಲ್ ಮಾರ್ಕ್‌ಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ.
* ವರ್ಗ ಮತ್ತು ಗುಣಲಕ್ಷಣಗಳು: ರೈಫ್ಲಿಂಗ್ ಟ್ವಿಸ್ಟ್, ಕ್ಯಾಲಿಬರ್, ಲ್ಯಾಂಡರ್ ಮತ್ತು ಗ್ರೂವ್ ಇವುಗಳ ಪರಿಶೀಲನೆಯಿಂದ ಯಾವ ಕ್ಯಾಟಗೆರಿಯ ರೈಫಲ್ ಎಂಬುದನ್ನು ಪತ್ತೆ ಮಾಡಬಹುದು.
* ಸ್ವಯಂಚಾಲಿತ ಬ್ಯಾಲಿಸ್ಟಿಕ್ಸ್ ವ್ಯವಸ್ಥೆ: ಅನೇಕ ಪ್ರಯೋಗಾಲಯಗಳು ಶಸ್ತ್ರಾಸ್ತ್ರಗಳ ಪತ್ತೆ ಕಾರ್ಯಕ್ಕೆ ಇಂಟಿಗ್ರೇಟೆಡ್ ಬ್ಯಾಲಿಸ್ಟಿಕ್ಸ್ ಐಡೆಂಟಿಫಿಕೇಶನ್ ಸಿಸ್ಟಮ್ (IBIS) ವಿಧಾನವನ್ನ ಬಳಸುತ್ತವೆ. ಇಲ್ಲಿ ಬುಲೆಟ್ ಮತ್ತು ಕಾಟ್ರಿಜ್ ಕೇಸ್‌ಗಳ ಚಿತ್ರಗಳನ್ನು ಡಿಜಿಟಲೀಕರಿಸಿ ಹೋಲಿಕೆ ಮಾಡಲಾಗುತ್ತದೆ.
* ಅಡ್ವಾನ್ಸ್‌ಡ್ 3ಡಿ ಇಮೇಜಿಂಗ್: ಟೂಲ್ ಮಾರ್ಕ್ ಮಾದರಿಗಳನ್ನ 3ಡಿ ನಲ್ಲಿ ಚಿತ್ರಿಸಿ 2ಡಿ ಇಮೇಜಿಂಗ್‌ನೊಂದಿಗೆ ಹೋಲಿಕೆ ಮಾಡುವುದು. ಇದು ಯಾವುದೇ ಶಸ್ತ್ರಾಸ್ತ್ರದ ಜೊತೆಗೆ ನಿಖರವಾದ ಹೋಲಿಕೆ ನೀಡುತ್ತದೆ.
* ಸಪೋರ್ಟಿಂಗ್ ಅನಾಲಿಸಿಸ್: ರೈಫಲ್‌ನ ಅವಶೇಷಗಳ ಆಧಾರದ ಮೇಲೆ ನಿರ್ದಿಷ್ಟ ಬಂದೂಕಿನಿಂದ ಇತ್ತೀಚೆಗೆ ಹಾರಿಸಲಾಗಿದೆಯೇ? ಎಂಬುದನ್ನು ಕಂಡುಕೊಳ್ಳುವುದು. ನಂತರ ಕಾಟ್ರಿಜ್ ಮೇಲಿನ ಬೆರಳಚ್ಚುಗಳನ್ನ ಪತ್ತೆ ಮಾಡಲಾಗುತ್ತದೆ. ಜೊತೆಗೆ ಡಿಎನ್‌ಎ ಅನ್ನೂ ಸಹ ಇದರಿಂದ ಸಂಗ್ರಹಿಸುವ ಸಾಧ್ಯತೆ ಇದೆ.