ಮಡಿಕೇರಿ: ಬೇಸಿಗೆಯ ಬಿಸಿ ಎಲ್ಲರನ್ನ ಕಾಡೋಕೆ ಶುರುವಾಗಿದೆ. ಸೂರ್ಯನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರಾಣಿಗಳೂ ಕೂಡ ಬಿಸಿಲಿನಿಂದ ಬಚಾವಾಗೋಕೆ ಪರದಾಡುತ್ತಿವೆ. ಹೀಗೆ ಬಿಸಿಲಿನ ಬೇಗೆಯಿಂದ ಬಳಲಿ ನೀರು ಕುಡಿಯಲೆಂದು ಬಾವಿಯ ಬಳಿ ತೆರಳಿದ ಗೂಳಿಯೊಂದು ಆಯತಪ್ಪಿ ಬಾವಿಗೆ ಬಿದ್ದು ನರಳಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ದಾಹ ನೀಗಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ಮೂಕ ಪ್ರಾಣಿಯನ್ನು ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಿಸಿ ಅದರ ಜೀವ ಉಳಿಸಿದ್ದಾರೆ.
Advertisement
ಭಾನುವಾರ ಸಂಜೆ ನಗರದ ರಾಜಾಸೀಟ್ ಬಳಿಯಿರೋ ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರದಲ್ಲಿರೋ 25 ರಿಂದ 30 ಅಡಿ ಆಳದ ಬಾವಿಯ ಸನಿಹ ಬಂದ ಗೂಳಿ ಬಾವಿಗೆ ಬಿದ್ದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಇಳಿದು ಗೂಳಿಯ ದೇಹಕ್ಕೆ ಎರಡು ಕಡೆ ಬೆಲ್ಟ್ ಕಟ್ಟಿ, ತಲೆಯ ಭಾಗಕ್ಕೆ ಹಗ್ಗ ಕಟ್ಟಿಕೊಂಡು ಸ್ವಲ್ಪ ಸ್ವಲ್ಪವೇ ಮೇಲಕ್ಕೆತ್ತಿ ಕಡೆಗೂ ಅಮಾಯಕ ಗೂಳಿಯನ್ನು ರಕ್ಷಿಸಿದ್ದಾರೆ.
Advertisement
ಸತತ ಒಂದೂವರೆ ತಾಸು ನಡೆದ ಕಾರ್ಯಾಚರಣೆಯ ಬಳಿಕ ಗೂಳಿಯನ್ನು ಮೇಲಕ್ಕೆತ್ತಲಾಗಿದ್ದು, ಕೂಡಲೇ ಗೂಳಿ ಸ್ಥಳದಿಂದ ಓಡಿಹೋಗಿದೆ. ಭಾರೀ ಗಾತ್ರದ ಗೂಳಿ ನೀರಿನಲ್ಲಿ ಬಿದ್ದಿದ್ದರಿಂದ ಅದನ್ನು ಮೇಲೆತ್ತುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದ್ರೆ ಅಗ್ನಿಶಾಮಕಲ ಸಿಬ್ಬಂದಿ ಚಾಣಾಕ್ಷತೆಯಿಂದ ಗೂಳಿಯ ದೇಹಕ್ಕೆ ಹಗ್ಗ ಕಟ್ಟಿ ಬಹಳ ಬುದ್ಧಿವಂತಿಕೆಯಿಂದ ಅದನ್ನು ಮೇಲಕ್ಕೆತ್ತುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದಾರೆ.