ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನಿಗೆ ಹೋರಿ ತಿವಿದು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ನಿವಾಸಿ ರಾಕೇಶ್ (25) ಎಂದು ಗುರುತಿಸಲಾಗಿದೆ. ಜಿಲ್ಲೆಯ ಹಲವೆಡೆಗಳಲ್ಲಿ ದೀಪಾವಳಿ ಹಬ್ಬದ ನಂತರ ಹೋರಿ ಬೆದರಿಸುವ ಸ್ಪರ್ಧೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕೋವಿಡ್-19 ಭೀತಿ ಹಾಗೂ ಕಳೆದ ಎರಡು ವರ್ಷದ ಹಿಂದೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಮೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈಗಾಗಿಯೇ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಗೆ ಬ್ರೇಕ್ ಹಾಕಿತ್ತು. ಇದನ್ನೂ ಓದಿ: ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು
ಈ ಬಾರಿ ಜಿಲ್ಲೆಯ ಕೆಲವೆಡೆಗಳಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದರೆ, ಇನ್ನು ಕೆಲವೆಡೆಗಳಲ್ಲಿ ಜಿಲ್ಲಾಡಳಿತದ ಗಮನಕ್ಕೆ ಬಾರದೆ ಗ್ರಾಮಸ್ಥರು ಸ್ಪರ್ಧೆ ಆಯೋಜಿಸುತ್ತಿದ್ದಾರೆ. ಶಿಕಾರಿಪುರದ ದೊಡ್ಡಕೇರಿ ಬಡಾವಣೆಯಲ್ಲಿ ಸಹ ಇಂದು ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯಿಂದ ಅಷ್ಟೇ ಅಲ್ಲದೇ ಹೊರ ಜಿಲ್ಲೆಯಿಂದಲೂ ಸಹ ಸ್ಪರ್ಧೆಯಲ್ಲಿ ಹೋರಿಗಳು ಭಾಗವಹಿಸಿದ್ದವು. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಬಂದಿದ್ದ ಯುವಕ ರಾಕೇಶ್‍ನಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಯೊಂದು ಹಿಂಬದಿಯಿಂದ ತಿವಿದಿದೆ. ಹೋರಿ ತಿವಿತಕ್ಕೆ ಒಳಗಾದ ಯುವಕ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಕುರಿತು ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 6.5 ನಿಮಿಷದಲ್ಲಿ ಏರಿದ್ದ ಅಪ್ಪು