– ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ ಗೆದ್ದಿದ್ದ ಪ್ರಳಯ
ಹಾವೇರಿ: ಕೊಬ್ಬರಿ ಹೋರಿಯನ್ನು ಮನೆ ಮಗನಂತೆ ಸಾಕಿದ್ದರು. ಅದರೆ ಅನಾರೋಗ್ಯದಿಂದ ಹೋರಿ ಸಾವನ್ನಪ್ಪಿದೆ. ಸಾವಿನ ನಂತರವೂ ಯಜಮಾನ ಅದೇ ಪ್ರೀತಿ ತೋರಿದ್ದು, ಸಕಲ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ರೇಣುಕಯ್ಯ ಹಿರೇಮಠ ಹೋರಿಯ ಅಂತ್ಯಕ್ರಿಯೆಯನ್ನು ಸಕಲ ವಿಧಿ ವಿಧಾನಗಳ ಮೂಲಕ ನೆರವೇರಿಸಿದ್ದಾರೆ. ಹೋರಿಯನ್ನು ಪ್ರೀತಿಯಿಂದ ‘ಪ್ರಳಯ’ ಎಂದು ಕರೆಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಪ್ರಳಯ ಇಂದು ಮೃತಪಟ್ಟಿದ್ದಾನೆ.
Advertisement
Advertisement
ಪ್ರಳಯ ಹೋರಿ ಬೆದರಿಸುವ ಸ್ವರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದ. ಹೀಗಾಗಿ ರೇಣುಕಯ್ಯ ಅಷ್ಟೇ ಪ್ರೀತಿಯಿಂದ ಮನೆಯ ಮಗನಂತೆ ಸಾಕಿದ್ದರು. ಸತ್ತ ನಂತರವೂ ಅದೇ ರೀತಿಯ ಪ್ರೀತಿ ತೋರಿದ್ದು, ಮನುಷ್ಯರಂತೆಯೇ ಅದಕ್ಕೂ ವಿಧಿ ವಿಧಾನ ನೆರವೇರಿಸಿ, ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಿ, ಸಕಲ ವಾದ್ಯಗಳೊಂದಿಗೆ ಗ್ರಾಮದ ತುಂಬ ಮೆರವಣಿಗೆ ಮಾಡಿ ರೇಣುಕಯ್ಯ ತಮ್ಮ ಜಮೀನಿನಲ್ಲಿ ವೀರಶೈವ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಿದರು.
Advertisement
ಇಂದು ಊರ ಗ್ರಾಮಸ್ಥರು ಸೇರಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು. ಮನೆಯ ಮಾಲೀಕರು ಸೇರಿದಂತೆ ಅಂತ್ಯಕ್ರಿಯೆ ಆಗಮಿಸಿದ ಸಂಬಂಧಿಕರು, ಸುತ್ತಮುತ್ತಲಿನ ಗ್ರಾಮದ ಜನರು ಕಂಬನಿ ಮಿಡಿದರು.