– ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿ ಮೇಲೆ ಬಿದ್ದ ಗೋಡೆ
ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ನಾಲ್ವರು ಮೃತಪಟ್ಟ ಘಟನೆ ಈಜೀಪುರದಲ್ಲಿ ನಡೆದಿದೆ. ಘಟನೆ ವೇಳೆ ಗರ್ಭಿಣಿಯೊಬ್ಬರು ಅವಶೇಷದಡಿ ಸಿಲುಕಿದ್ದಾರೆ.
ಗ್ರೀನ್‍ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ರವಿಚಂದ್ರ ಹಾಗೂ ಕಲಾವತಿ ಹಾಗೂ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರಿಗೆ ಗಾಯವಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿಚಂದ್ರ ಹಾಗೂ ಕಲಾವತಿ ಎಂಬವರು ಮೇಲಿನ ಮನೆಯಲ್ಲಿದ್ದರು. ಕೆಳಗಿನ ಮನೆಯಲ್ಲಿದ್ದ ಎಂಟು ತಿಂಗಳ ಗರ್ಭಿಣಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳು ಒಳಗೆ ಸಿಲುಕಿದ್ದರು. ಅಶ್ವಿನಿ ಅವರ ಗಂಡ ನೀರು ತರಲು ಹೊರಗೆ ಬಂದ ವೇಳೆ ಈ ಅವಘಡ ಸಂಭವಿಸಿದೆ.
ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಆದ್ರೆ ಇವರೇನು ಕೆಲಸ ಮಾಡುತ್ತಿದ್ದಾರೆ ಎಂಬುವುದು ತಿಳಿದಿಲ್ಲ. ಘಟನೆಯಿಂದಾಗಿ ಸ್ಥಳೀಯ ಮನೆಗಳೂ ಕೂಡ ಬಿರುಕುಬಿಟ್ಟಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಘಟನೆಯಿಂದಾಗಿ ಗಾಯಗೊಂಡ ಮೇಲಿನ ಮನೆಯಲಿದ್ದ 5 ಮಂದಿಯನ್ನು ಫೀಲೋಮಿನಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದು, ಒಬ್ಬರು ಗಂಭಿರ ಸ್ಥಿತಿಯಲ್ಲಿದ್ದಾರೆ ಅಂತ ಹೇಳಿದ್ರು. ನೆಲಮಾಳಿಗೆಯಲ್ಲಿ ಗರ್ಭಿಣಿ ಸೇರಿ ನಾಲ್ಕು ಮಂದಿ ಇದ್ದರು. ಇದರಲ್ಲಿ ಗೃಹಿಣಿಯೊಬ್ಬರು ಪಾರಾಗಿದ್ದು, ಅವರ ಸೊಸೆ ಹಾಗೂ ಇಬ್ಬರು ಮಕ್ಕಳು ಅವಶೇಷಗಡಿ ಸಿಲುಕಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಗೃಹಿಣಿ ಮಗ ಹಾಗೂ ಇನ್ನಿಬ್ಬರು ಹೊರಗಡೆ ಹೋಗಿದ್ದರು. ಹೀಗಾಗಿ ಅವರೂ ಕೂಡ ಅಪಾಯದಿಂದ ಪಾರಾಗಿದ್ದಾರೆ ಅಂತ ತಿಳಿಸಿದ್ರು.
ಪತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, 7 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟವಾಗಿದೆ. ಸುಮಾರು 7.10 ಸುಮಾರಿಗೆ ಮನೆ ಕುಸಿದಿದೆ. ಘಟನೆಯ ತಕ್ಷಣವೇ ನಾಲ್ಕು ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಂತರ ನೆರೆದ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಶಾಲಾ ವಿದ್ಯಾರ್ಥಿಯನ್ನು ಅವಶೇಷಗಳಡಿಯಿಂದ ಹೊರತೆಗೆದೆವು. ಒಟ್ಟಿನಲ್ಲಿ ಅವಿವಾಹಿತರು ನಾಲ್ಕು ಮಂದಿ ಒಳಗಡೆ ಸಿಲುಕಿಕೊಂಡಿರಬಹುದು ಅಂತ ಹೇಳಿದ್ರು.