ದಾವಣಗೆರೆ: ನಗರ ದೇವತೆ ದುಗ್ಗಮ್ಮನ ಜಾತ್ರೆ ಎರಡು ವರ್ಷಗಳಿಗೊಮ್ಮೆ ನಡೆಯಲಿದ್ದು, ಇಲ್ಲಿ ದೇವತೆಗೆ ಕೋಣ ಬಲಿ ನೀಡುವುದೇ ಈ ಜಾತ್ರೆಯ ವಿಶೇಷ. ಆದರೆ ಜಿಲ್ಲಾಡಳಿತ ಪ್ರಾಣಿ ಬಲಿಯನ್ನು ಸಂಪೂರ್ಣ ನಿಷೇಧ ಮಾಡಿದೆ. ಅಲ್ಲದೆ ದುಗ್ಗಮ್ಮ ದೇವಸ್ಥಾನ ಸುತ್ತ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರಾಣಿ ಬಲಿ ನಿಷೇಧದ ನಡುವೆಯೂ ದಾವಣಗೆರೆ ನಗರ ದುಗ್ಗಮ್ಮನಿಗೆ ಕೋಣ ಬಲಿ ನೀಡಲಾಗಿದೆ.
ನಗರದ ದುಗ್ಗಮ್ಮ ದೇವಸ್ಥಾನ ಸಮೀಪದಲ್ಲೇ ಇರುವ ಸೀಮೆಎಣ್ಣೆ ಬಂಕ್ ಬಳಿಯಲ್ಲಿ ಕೋಣವನ್ನು ಬಲಿ ನೀಡಲಾಗಿದೆ ಎನ್ನಲಾಗಿದೆ. ಕೋಣ ಬಲಿ ನೀಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಡಿಸಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ ರಾತ್ರಿಯಲ್ಲೇ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅದೇಗೋ ಬೇರೊಂದು ಸ್ಥಳದಲ್ಲಿ ಕೋಣ ಬಲಿ ನೀಡಲಾಗಿದೆ.
Advertisement
Advertisement
ಜಾತ್ರೆಯಲ್ಲಿ ಕೋಣ ಬಲಿ ನೀಡಿದರೆ ಮಾತ್ರ ತಾಯಿ ಸಂತುಷ್ಟಿಯಾಗುತ್ತಾಳೆ ಎನ್ನುವ ನಂಬಿಕೆಯೊಂದಿಗೆ ದೇವಸ್ಥಾನ ಪ್ರದೇಶ ಬಿಟ್ಟು ಇನ್ನೊಂದು ಪ್ರದೇಶದಲ್ಲಿ ಊಧೋ ಊಧೋ ಎಂದು ಭಕ್ತರು ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನಲಾಗಿದ್ದು ಬಳಿಕ ಕೋಣದ ರಕ್ತದಲ್ಲಿ ಚರಗ ಹಾಕಿದ್ದಾರೆ. ಅಲ್ಲದೆ ರಾತ್ರಿ ದುಗ್ಗಮ್ಮ ದೇವಿಗೆ ಬಿಟ್ಟಂತಹ ಕೋಣದಿಂದ ಸಿರಂಜ್ ಮೂಲಕ ವೈದ್ಯರು ರಕ್ತವನ್ನು ತೆಗೆದು ದುಗ್ಗಮ್ಮ ದೇವಿಗೆ ಅರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಕೋಣವನ್ನು ಬಲಿ ನೀಡುತ್ತಾರೆ ಎನ್ನುವ ಮಾಹಿತಿಯಿಂದ ಇಡೀ ರಾತ್ರಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿ, ಎಸ್‍ಪಿ ಸೇರಿದಂತೆ ಹಲವು ಅಧಿಕಾರಿಗಳು ಜಾಗರಣೆ ಮಾಡಿದರು. ಆದರೂ ಕೂಡ ದೇವಸ್ಥಾನದಿಂದ ದೂರದಲ್ಲಿ ದೇವರ ಕೋಣವನ್ನು ಬಲಿಕೊಟ್ಟು ದೇವತೆಗೆ ಭಕ್ತಿಯಿಂದ ಕೋಣದ ತಲೆ ಮೇಲೆ ದೀಪವಿಟ್ಟು ನೈವೇದ್ಯ ಅರ್ಪಿಸಿದರು.