ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಎಮ್ಮೆ ಸಿಲುಕಿ ಗಂಟೆಗಟ್ಟಲೆ ರಿಪೇರಿಯಾಗದೇ ರೈಲು ಹಳಿಯಲ್ಲೇ ನಿಂತಿದ್ದು, ಬಳಿಕ ಮೈಸೂರಿನಿಂದ ಬದಲಿ ಇಂಜಿನ್ ತಂದು ಅಳವಡಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡ ಘಟನೆ ನಡೆದಿದೆ.
ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಜಿಲ್ಲೆಯ ಹೊಸಬೂದನೂರು ಗ್ರಾಮದ ಬಳಿ ಎರಡು ಎಮ್ಮೆಗಳು ಅಡ್ಡ ಬಂದಿವೆ. ಇದ್ರಿಂದ ರೈಲು ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾರೆ. ಪರಿಣಾಮ ಒಂದು ಎಮ್ಮೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ರೆ, ಮತ್ತೊಂದಕ್ಕೆ ಅಲ್ಪಸ್ವಲ್ಪ ಗಾಯಗಳಾಗಿವೆ. ತಜ್ಞರು ಬಂದು ರಿಪೇರಿ ಮಾಡಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಇದ್ರಿಂದ ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರು ಬಿರು ಬಿಸಿಲಿನಲ್ಲಿ ರೈಲ್ವೆ ಹಳಿಯ ಮೇಲೆ ನಿಂತು ಪರದಾಡಿದ್ದರು.
Advertisement
ಹಳಿಯಿಂದ ಸುಮಾರು ಒಂದೂವೆರ ಕಿಲೋಮೀಟರ್ ದೂರದವರೆಗೆ ಹೆದ್ದಾರಿಯ ಸಂಪರ್ಕ ಇಲ್ಲದ್ದರಿಂದ ಪ್ರಯಾಣಿಕರು ಬದಲಿ ದಾರಿಯಿಲ್ಲದೇ ಸಂಕಟ ಪಡುತ್ತಿದ್ದಾರೆ. ವಿದೇಶಕ್ಕೆ ಪ್ರಯಾಣ ಹೊರಟವರು, ಬೆಂಗಳೂರಿಗೆ ಇಂಟರ್‍ವ್ಯೂಗೆ, ಹೀಗೆ ಹಲವು ಕಾರಣಗಳಿಂದ ಬೆಂಗಳೂರಿಗೆ ಹೊರಟವರು ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡದೇ, ಪ್ರಯಾಣಿಕರಿಗೆ ಸರಿಯಾದ ಉತ್ತರವನ್ನು ನೀಡುತ್ತಿಲ್ಲ. ಹೀಗಾದ್ರೆ ಸಾಮಾನ್ಯ ಪ್ರಯಾಣಿಕರ ಕಷ್ಟ ಯಾರ ಬಳಿ ಹೇಳೋದು ಅಂತಾ ಪ್ರಯಾಣಿಕರು ಆಕ್ರೋಶ ಹೊರಹಾಕಿದರು.
Advertisement
ಹಳಿಯಲ್ಲೇ 12.30 ಯಿಂದ 2.40ರವರೆಗೆ ನಿಂತಿದ್ದ ರೈಲಿಗೆ ಮೈಸೂರಿನಿಂದ ಬದಲಿ ಇಂಜಿನ್ ತಂದು ಅಳವಡಿಸಿದ ಬಳಿಕ ಸಂಚರಿಸಿದೆ.