ರಾಯಚೂರು: ಅತೀ ವೇಗದಲ್ಲಿದ್ದ ಇನ್ನೋವಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಮಾನ್ವಿಗೆ ಹೊರಟಿದ್ದ ಇನ್ನೋವಾ ಕಾರ್ ಚಾಲಕನ ನಿಯಂತ್ರಣ ತಪ್ಪಿದ್ದು, ಎದುರುಗಡೆಯಿಂದ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಂಡಿ ಸಮೇತ ನೂರಾರು ಅಡಿ ದೂರದವರೆಗೆ ಕಾರ್ ಎಳೆದುಕೊಂಡು ಬಂದಿದೆ. ರಸ್ತೆ ಬದಿಯಲ್ಲಿದ್ದ ಹೋಟೆಲ್ ಗೆ ವಾಹನ ನುಗ್ಗಿದ್ದರಿಂದ ಹೋಟೆಲ್ ಜಖಂಗೊಂಡಿದೆ. ಅಲ್ಲದೇ ಘಟನೆಯಿಂದ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟು, ಇನ್ನೊಂದು ಎತ್ತು ಗಾಯಗೊಂಡಿದೆ. ಕಾರ್ ನಲ್ಲಿದ್ದ ಮೂವರು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಾಹನ ಚಾಲಕ ಹಾಗೂ ಬಂಡಿಯಲ್ಲಿದ್ದ ರೈತ ಗಂಭೀರ ಗಾಯಗೊಂಡಿದ್ದು, ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.