ಬೆಂಗಳೂರು: ವಿಧಾನಸಭೆ (Vidhan Sabha) ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ್ದ ವಿಪಕ್ಷಗಳ 18 ಸದಸ್ಯರು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ (UT Khader) ರೂಲಿಂಗ್ ಹೊರಡಿಸಿದ್ದಾರೆ.
ವಿಧಾನಸಭೆ ನಡಾವಳಿಯ 348ನೇ ನಿಯಮದಡಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಅಶ್ವಥನಾರಾಯಣ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯನ್, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ.ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ, ಚಂದ್ರು ಲಮಾಣಿ ಅವರನ್ನ ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದರು. ಸ್ಪೀಕರ್ ರೂಲಿಂಗ್‌ಗೆ ವಿಪಕ್ಷ ಸದಸ್ಯರು ತೀವ್ರ ಖಂಡನೆ ವ್ಯಕ್ತಪಡಿಸಿದರು.
ಹನಿಟ್ರ್ಯಾಪ್ (Honey Trap) ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರಿಂದು ವಿಧಾನಸಭೆಯ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಖಾದರ್ ಮೇಲೆ ಪೇಪರ್ ಎಸೆದು ಸಿಟ್ಟು ಹೊರ ಹಾಕಿದರು. ಇದರಿಂದ ಅಸಮಾಧಾನಗೊಂಡ ಸ್ಪೀಕರ್ ಕಲಾಪವನ್ನು ಮುಂದೂಡಿದ್ದರು. ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪೀಠಕ್ಕೆ ಅಪಮಾನ ಮಾಡಿದ 18 ಶಾಸಕರನ್ನು 6 ತಿಂಗಳ ಕಾಲ ಸ್ಪೆಂಡ್ ಮಾಡಿ ಸ್ಪೀಕರ್ ರೂಲಿಂಗ್ ಹೊರಡಿಸಿದರು.
ಅಮಾನತುಗೊಂಡ ಶಾಸಕರಿಗೆ ಈ ಷರತ್ತುಗಳು ಅನ್ವಯ
1. ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
2. ಶಾಸಕರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
3. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
4. ಅಮಾನತ್ತಿನ ಅವಧಿಯಲ್ಲಿ ಅವರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
5. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರು ಮತದಾನ ಮಾಡುವಂತಿಲ್ಲ.
6. ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.
ಸ್ಪೀಕರ್ ಪೀಠಕ್ಕೆ ಅಪಮಾನ!
ಇಂದು ವಿಧಾನಸಭೆಯ ಅಧಿವೇಶನದ ಕಡೆಯ ದಿನ. ಹೀಗಾಗಿ ಬೆಳಗ್ಗೆ ವಿಧಾನಸಭೆ ಆರಂಭಗೊಳ್ಳುತ್ತಿದ್ದಂತೆ ಅಶೋಕ್ ಮತ್ತು ಸುನಿಲ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದ ಸಚಿವರೇ ತನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಜಡ್ಜ್‌ಗಳ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ರಾಜಣ್ಣ ಹೇಳಿದ್ದಾರೆ. ಹೀಗಾಗಿ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ವಿಪಕ್ಷಗಳ ಆಗ್ರಹಕ್ಕೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಈ ಪ್ರಕರಣವನ್ನುಗಂಭೀರವಾಗಿ ಸ್ವೀಕರಿಸಿ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು. ನಂತರ ಸಿದ್ದರಾಮಯ್ಯ ನವರು ಬಜೆಟ್ ಭಾಷಣಕ್ಕೆ ಉತ್ತರ ನೀಡಲು ಆರಂಭಿಸಿರು. ಈ ವೇಳೆ ವಿಪಕ್ಷ ಸದಸ್ಯರು ಬಾವಿಗೆ ಇಳಿದು ಪ್ರತಿಭಟಿಸಿದರು. ವಿಪಕ್ಷಗಳ ಪ್ರತಿಭಟನೆಗೆ ಕ್ಯಾರೇ ಎನ್ನದ ಸಿಎಂ ತಮ್ಮ ಭಾಷಣವನ್ನು ಮುಂದುವರಿಸಿದರು.
ಸಿಎಂ ಭಾಷಣದ ಬಳಿಕ ಸರ್ಕಾರ ಹಲವು ಮಸೂದೆಗಳಿಗೆ ಅಂಗೀಕಾರವನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮಸೂದೆಗಳ ಪ್ರತಿಯನ್ನು ಸ್ಪೀಕರ್ ಮೇಲೆ ಎಸೆದು ಸಿಟ್ಟು ಪ್ರದರ್ಶಿಸಿದರು. ಗದ್ದಲ ಜಾಸ್ತಿ ಆಗುತ್ತಿದ್ದಂತೆ ಖಾದರ್ ಕಲಾಪವನ್ನು ಮುಂದಕ್ಕೆ ಹಾಕಿದ್ದರು.
ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಕೇಸರಿ ಶಾಲು ಧರಿಸಿ ಸದನ ಪ್ರವೇಶಿಸಿದರು. ಹನಿಟ್ರ್ಯಾಪ್ ಪ್ರಕರಣದ ತನಿಖೆಗೆ ಒತ್ತಾಯಿಸಿ ಧರಣಿ ಮುಂದುವರಿಸಿದರು. ಸಿಎಂ ರಾಜೀನಾಮೆಗೆ ಆಗ್ರಹಿಸಿದರು.