ಇದೇ ಫೆ.1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ‘ಕೇಂದ್ರ ಬಜೆಟ್ 2026’ (Budget 2026) ಮಂಡಿಸಲಿದ್ದಾರೆ. ಬಜೆಟ್ ಮೇಲೆ ಹಲವು ನಿರೀಕ್ಷೆಗಳು ಗರಿಗೆದರಿವೆ. ನಮಗೆ ಏನು ಸಿಗುತ್ತದೆ ಎಂದು ವಿವಿಧ ವಲಯಗಳು ಕುತೂಹಲದಿಂದ ಕಾದಿವೆ. 2025 ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆಗಳನ್ನು ಕೊಟ್ಟಿತ್ತು. ಈ ಬಜೆಟ್‌ನಲ್ಲಿ ಮತ್ತೇನಾದರೂ ಬಂಪರ್ ಸಿಗಬಹುದೇ ಎಂದು ಮಧ್ಯಮ ವರ್ಗದ ತೆರಿಗೆದಾರರು ಉತ್ಸಾಹ ಮತ್ತು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ (Tax) ಅಡಿಯಲ್ಲಿ ಏನೇನು ಕೊಡುಗೆ ನೀಡಲಾಗಿತ್ತು? ಈ ಬಜೆಟ್‌ನಲ್ಲಿ ನಿರೀಕ್ಷೆಗಳು ಏನಿರಬಹುದು? ಹಳೆಯ ತೆರಿಗೆ ಪದ್ಧತಿ ಮುಂದುವರಿಯುತ್ತದೆಯೇ? ಹೊಸ ಪದ್ಧತಿಯಲ್ಲಿ ಕಡಿತಗಳು ಜಾರಿಗೆ ಬರುತ್ತವೆಯೇ? ತೆರಿಗೆ ಬಗ್ಗೆ ಆರ್ಥಿಕ ತಜ್ಞರು ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ.
ಹಿಂದಿನ ಬಜೆಟ್‌ನಲ್ಲಿ ಸಿಕ್ಕಿದ್ದೇನು?
ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಮಧ್ಯಮ ವರ್ಗದ ನಿರೀಕ್ಷೆಗಳಿಗೆ ಬಲ ತುಂಬಿತ್ತು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಧ್ಯಮ ವರ್ಗದ ಕೊಡುಗೆ ಅಪಾರ. ಇದನ್ನು ಮನಗಂಡಿದ್ದ ಪ್ರಧಾನಿ ಮೋದಿ ಸರ್ಕಾರ, ತೆರಿಗೆ ಬಂಪರ್ ಕೊಡುಗೆ ನೀಡಿತ್ತು. ವಾರ್ಷಿಕ 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ಕೇಂದ್ರ ನೀಡಿತ್ತು. ಇದರೊಂದಿಗೆ ಮೂಲ ವಿನಾಯಿತಿ ಮಿತಿಯನ್ನು 3ರಿಂದ 4 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ವೇತನದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50ರಿಂದ 75 ಸಾವಿರ ರೂ.ಗೆ ಹೆಚ್ಚಿಸಲಾಯಿತು. ಅತಿ ಹೆಚ್ಚಿನ ಶೇ.30 ತೆರಿಗೆ ಪ್ರಮಾಣವು 25 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಇರುವವರಿಗೆ ಅನ್ವಯವಾಗಿತ್ತು. ಇದನ್ನೂ ಓದಿ: Union Budget: ಫೆ.1ರ ಭಾನುವಾರವೇ ಕೇಂದ್ರ ಬಜೆಟ್ ಮಂಡನೆ
ಮೋದಿ ಸರ್ಕಾರ ತೆರಿಗೆದಾರರ ಪರವಾಗಿ ಹಿಂದಿನಿಂದಲೂ ರಿಯಾಯಿತಿಗಳನ್ನು ನೀಡಿದೆ. ಆರಂಭದಲ್ಲಿ 2.5 ಲಕ್ಷ ರೂ. ಇದ್ದ ತೆರಿಗೆ ರಹಿತ ಸ್ಲ್ಯಾಬ್ ಅನ್ನು 2019ರಲ್ಲಿ 5 ಲಕ್ಷ ರೂ.ಗೆ ಏರಿಸಿತು. 2023ರಲ್ಲಿ ಅದನ್ನು 7 ಲಕ್ಷಕ್ಕೆ ಏರಿಕೆ ಮಾಡಲಾಯಿತು. ಬಳಿಕ 2025ರಲ್ಲಿ 12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರಿಗೆ ತೆರಿಗೆ ವಿನಾಯಿತಿ ನೀಡಲಾಯಿತು. ಇದರೊಂದಿಗೆ 75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯವಾಗಿದ್ದರಿಂದ ಒಟ್ಟಾರೆಯಾಗಿ ವಾರ್ಷಿಕ ಆದಾಯ 12,75,000 ರೂ. ಆದಾಯವಿರುವವರು ತೆರಿಗೆ ಹೊರೆ ಬಗ್ಗೆ ಚಿಂತಿಸುವ ಅವಶ್ಯಕತೆಯೇ ಇರಲಿಲ್ಲ.
ಹಳೆಯ ತೆರಿಗೆ ಪದ್ಧತಿ ಏನಾಗುತ್ತೆ?
ಹೊಸ ತೆರಿಗೆ ಪದ್ಧತಿಗೆ ಸರ್ಕಾರ ಆದ್ಯತೆ ನೀಡಿದೆ. ಆದರೆ, ಹಳೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ತೆರಿಗೆದಾರರಲ್ಲಿ ಬಹುಪಾಲು ಮಂದಿ ಹಳೆಯ ಪದ್ಧತಿಯನ್ನೇ ಬಯಸುತ್ತಾರೆ. ಹಳೆಯ ತೆರಿಗೆ ಪದ್ಧತಿ ತೆರಿಗೆದಾರರಿಗೆ ಇನ್ನೂ ಆಕರ್ಷದಾಯಕವಾಗಿದೆ. ವಿಶೇಷವಾಗಿ HRA, ಸ್ವಯಂ ಆಕ್ರಮಿತ ಮನೆಯ ಮೇಲಿನ ಗೃಹ ಸಾಲದ ಬಡ್ಡಿ, ss.80C, 80D, 80E, 80G ಇತ್ಯಾದಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. 28% ಜನರು ಇನ್ನೂ ಹಳೆಯ ಪದ್ಧತಿಯನ್ನು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ತಕ್ಷಣದ ಹಂತ-ಹಂತದ ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂಬುದು ಆರ್ಥಿಕ ತಜ್ಞರ ಲೆಕ್ಕಾಚಾರ. ಆದರೂ, ಸರ್ಕಾರವು ತೆರಿಗೆದಾರರನ್ನು ಹೊಸ ವ್ಯವಸ್ಥೆಯ ಕಡೆಗೆ ಆಕರ್ಷಿಸುವುದನ್ನು ಮುಂದುವರಿಸಬಹುದು. ಇದನ್ನೂ ಓದಿ: ಭಾರತದ Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ: ಪ್ರಧಾನಿ ಮೋದಿ
ಹಳೆ ತೆರಿಗೆ ಬಗ್ಗೆ ತಜ್ಞರು ಹೇಳೋದೇನು?
ಹಿಂದಿನ ಬಜೆಟ್‌ನಲ್ಲೇ ಸರ್ಕಾರವು ಗಮನಾರ್ಹ ಪ್ರಯೋಜನಗಳನ್ನು ನೀಡಿದೆ ಎಂದು ಸಿರಿಲ್ ಅಮರ್‌ಚಂದ್ ಮಂಗಲದಾಸ್ (ತೆರಿಗೆ ವಿಭಾಗ)ನ ಎಸ್.ಆರ್.ಪಟ್ನಾಯಕ್ ತಿಳಿಸಿದ್ದಾರೆ. ಹಿಂದಿನ ವರ್ಷದ ಬಜೆಟ್ ತೆರಿಗೆದಾರರಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡಿತು. ಹೀಗಾಗಿ, ತೆರಿಗೆ ಸ್ಲ್ಯಾಬ್ ದೃಷ್ಟಿಕೋನದಿಂದ ಇದಕ್ಕಿಂತಲೂ ಗಮನಾರ್ಹ ತೆರಿಗೆ ಪ್ರಯೋಜನಗಳು ಇರುವುದು ಕಷ್ಟಸಾಧ್ಯ. ತೆರಿಗೆ ಪಾವತಿಸುವ ಜನರನ್ನು ಮತ್ತಷ್ಟು ಪ್ರೋತ್ಸಾಹಿಸಲು, ವಿಶೇಷವಾಗಿ ವಸತಿ ಆಸ್ತಿಯನ್ನು ಹೊಂದಲು ಅವರಿಗೆ ಸಹಾಯ ಮಾಡಲು ಮತ್ತು ಸಾರ್ವಜನಿಕ ಮಾರುಕಟ್ಟೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸರ್ಕಾರವು ಕೆಲವು ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ನಡುವಿನ ಅಂತರದ ಕುರಿತು ಪಟ್ನಾಯಕ್ ಮಾತನಾಡಿದ್ದಾರೆ. ಎರಡು ಪ್ರತ್ಯೇಕ ತೆರಿಗೆ ಪದ್ಧತಿಗಳನ್ನು ತಾತ್ಕಾಲಿಕ ಅವಧಿಗೆ ಇರಿಸಲಾಗಿದ್ದು, ಇದರಿಂದಾಗಿ ಅಸ್ತಿತ್ವದಲ್ಲಿರುವ ಬಾಧ್ಯತೆಗಳನ್ನು ಹೊಂದಿರುವ ಜನರು ಮೇಲೆ ಬಜೆಟ್ ಬದಲಾವಣೆಗಳಿಂದ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಹಳೆಯ ತೆರಿಗೆ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ತೆಗೆಯುವ ನಿರೀಕ್ಷೆಯಿದೆ. ಆದಾಗ್ಯೂ, 2026 ರ ಬಜೆಟ್‌ಗೆ ನಿರೀಕ್ಷೆಗಳು ಸಾಧಾರಣವಾಗಿರುತ್ತವೆ. ತೆರಿಗೆದಾರರು ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಬಾರದು. ತೆರಿಗೆದಾರರು ಯಾವುದೇ ಸಿದ್ಧತೆ ಮಾಡಿಕೊಳ್ಳಬೇಕಾಗಿಲ್ಲ. ಈ ವರ್ಷದ ಬಜೆಟ್, ಹಿಂದಿನ ಬಜೆಟ್‌ಗಳಲ್ಲಿ ಪರಿಚಯಿಸಲಾದ ಬದಲಾವಣೆಗಳನ್ನು ಸರಳೀಕರಿಸುವ ಮತ್ತು ಅವುಗಳ ಮೇಲೆ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ನೇರ ತೆರಿಗೆ ಕಾನೂನುಗಳಲ್ಲಿ ಹೊಸ ಬದಲಾವಣೆಗಳನ್ನು ಮಾಡಲು ಸರ್ಕಾರಕ್ಕೆ ಬಹಳ ಸೀಮಿತ ಅವಕಾಶವಿರುವ ಸಮಯದಲ್ಲಿ 2026 ರ ಬಜೆಟ್ ಬಂದಿದೆ ಎಂದು ದಿನೇಶ್ ಕನಬರ್ ತಿಳಿಸಿದ್ದಾರೆ. 2026ರ ಫೆ.1 ರಂದು ಮಂಡಿಸಲಾಗುವ ಕೇಂದ್ರ ಬಜೆಟ್ ಭಾರತದ ತೆರಿಗೆ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ಬರುತ್ತದೆ. ‘ಹೊಸ ಆದಾಯ ತೆರಿಗೆ ಕಾಯ್ದೆ-2025’ ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ, ಈ ಬಜೆಟ್ ನೇರ ತೆರಿಗೆಗಳ ಕುರಿತು ಯಾವುದೇ ಮಹತ್ವದ ಪ್ರಸ್ತಾಪಗಳನ್ನು ಹೊಂದಿರುವುದಿಲ್ಲ ಎಂದು ಸಾಮಾನ್ಯವಾಗಿ ನಿರೀಕ್ಷಿಸಬಹುದು ಎಂದು ಕನಬರ್ ಎಂದಿದ್ದಾರೆ.
ಈ ಸಲ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ
ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, 2025 ರ ಬಜೆಟ್‌ನಲ್ಲಿ ಹೆಚ್ಚಿನ ತೆರಿಗೆ ರಿಯಾಯಿತಿಗಳು ಮತ್ತು ಪರಿಷ್ಕೃತ ತೆರಿಗೆ ಸ್ಲ್ಯಾಬ್‌ಗಳಂತಹ ಬದಲಾವಣೆಗಳ ನಂತರ, ಹೊಸ ಆದಾಯ ತೆರಿಗೆ ವ್ಯವಸ್ಥೆಯ ಬಗ್ಗೆ ತೆರಿಗೆದಾರರಿಗೆ ನಿರೀಕ್ಷೆ ಸಹಜ. ಆದರೆ, ಈ ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಡಿಒ ಇಂಡಿಯಾದ ತೆರಿಗೆ ಮತ್ತು ನಿಯಂತ್ರಣ ಸೇವೆಗಳ ಪಾಲುದಾರ ಪ್ರೀತಿ ಶರ್ಮಾ ಅವರ ಪ್ರಕಾರ, ತೆರಿಗೆದಾರರು ಸಾಕಷ್ಟು ಕಡಿತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಹೊಸ ಆದಾಯ ತೆರಿಗೆ ವ್ಯವಸ್ಥೆಯು ಸಾಮಾನ್ಯವಾಗಿ ಕಡಿಮೆ ತೆರಿಗೆ ಹೊರೆಗೆ ಕಾರಣವಾಗುತ್ತದೆ. 2025 ರ ಬಜೆಟ್‌ನಲ್ಲಿ ಸರ್ಕಾರವು ಈಗಾಗಲೇ ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಿರುವುದರಿಂದ, ಈ ವರ್ಷದ ಬಜೆಟ್‌ನಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ದೊಡ್ಡ ಬದಲಾವಣೆಗಳ ಸಾಧ್ಯತೆ ತುಂಬಾ ಕಡಿಮೆ ಎಂದು ಅಭಿಪ್ರಾಯಪಡುತ್ತಾರೆ.



