ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 4ನೇ ಬಜೆಟ್ ಅನ್ನು ಇಂದು ಸಂಸತ್‌ನಲ್ಲಿ ಮಂಡಿಸಿದರು. 1 ಗಂಟೆ 32 ನಿಮಿಷಗಳ ಕಾಲ ಬಜೆಟ್ ಭಾಷಣವನ್ನು ಮಾಡಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದವರು, ರೈತರು, ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಡವರ ಉನ್ನತಿಗೆ ಬಜೆಟ್ ಆದ್ಯತೆ ನೀಡಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ
ಬಜೆಟ್‌ನ 5 ಪ್ರಮುಖಾಂಶಗಳು…
ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ:
ಈ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಮೇಲಿನ ಯಾವುದೇ ಬದಲಾವಣೆ ಇಲ್ಲ. ಸಹಕಾರಿ ಮತ್ತು ವೈಯಕ್ತಿಕ ಆದಾಯ ತೆರಿಗೆ ದರಗಳೂ ಬದಲಾಗದೆ ಹಾಗೇ ಉಳಿದಿವೆ.
ಬಜೆಟ್ ವೆಚ್ಚ 39.5 ಲಕ್ಷ ಕೋಟಿ ರೂ.:
ಈ ಸಾಲಿನ ಬಜೆಟ್ ವೆಚ್ಚ 39.5 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7.4ರಷ್ಟು ಹೆಚ್ಚಿದೆ. 2021ರ ಹಣಕಾಸು ವರ್ಷದ ಬಜೆಟ್ ವೆಚ್ಚ 35.1 ಲಕ್ಷ ಕೋಟಿ ಇತ್ತು. 2020ರಲ್ಲಿ ಬಜೆಟ್ ವೆಚ್ಚ 37.7 ಲಕ್ಷ ಕೋಟಿ ರೂ. ಇತ್ತು. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?
60 ಲಕ್ಷ ಮೇಕ್ ಇನ್ ಇಂಡಿಯಾ ಇದ್ಯೋಗ:
ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಆತ್ಮ ನಿರ್ಭರ್ ಭಾರತ್ ಸಾಧಿಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಐಎಲ್) ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ವರ್ಜುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಗೆ ಶೇ.30 ತೆರಿಗೆ:
ವರ್ಜುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು. ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಅಂತಹ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಯಾವುದೇ ಖರ್ಚು ಅಥವಾ ಭತ್ಯೆಗೆ ಸಂಬಂಧಿಸಿದಂತೆ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ.
ಆರ್‌ಬಿಐನಿಂದ ಡಿಜಿಟಲ್ ಕರೆನ್ಸಿ ಪರಿಚಯ:
ಡಿಜಿಟಲ್ ರುಪಿಯನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಬ್ಲಾಕ್‌ಚೈನ್ ಮತ್ತು ಇತರೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರುಪಿಯನ್ನು ನೀಡಲಾಗುವುದು. ಪರಿಣಾಮಕಾರಿ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗಾಗಿ ಇದನ್ನು 2022-23ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ: ಮೋದಿ ಸರ್ಕಾರದ ಶೂನ್ಯ ಬಜೆಟ್: ರಾಹುಲ್ ಗಾಂಧಿ ವ್ಯಂಗ್ಯ