ನವದೆಹಲಿ: ರೈತ ಮತ್ತು ಕಾರ್ಮಿಕ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದು, ರೈತರ ಖಾತೆಗೆ ನೇರವಾಗಿ ವಾರ್ಷಿಕವಾಗಿ 6 ಸಾವಿರ ರೂ. ಹಾಕುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.
2 ಹೆಕ್ಟೇರ್(4.94 ಎಕ್ರೆ)ಜಾಗ ಇರುವ ರೈತರ ಖಾತೆಗೆ 2 ಸಾವಿರದಂತೆ ಮೂರು ಕಂತುಗಳಲ್ಲಿ ಹಣವನ್ನು ಜಮೆ ಮಾಡಲಾಗುವುದು. 2018ರ ಪೂರ್ವಾನ್ವಯದಂತೆ ಇದು ಜಾರಿಯಾಗಲಿದೆ ಎಂದು ಪಿಯೂಶ್ ಗೋಯಲ್ ತಿಳಿಸಿದರು.
ಬಜೆಟ್ ಘೋಷಣೆ ಏನು?
ಪ್ರತಿಯೊಂದು ಗ್ರಾಮಗಳಿಗೆ ವಿದ್ಯುಚ್ಛಕ್ತಿ ನೀಡಲಾಗುತ್ತಿದ್ದು, ಮಾರ್ಚ್ 2019ರೊಳಗೆ ದೇಶದ ಪ್ರತಿ ಕುಟುಂಬಗಳ ಮನೆಯಲ್ಲಿ ವಿದ್ಯುತ್ ದೀಪ ಬೆಳಗಲಿದೆ. ಈ ಯೋಜನೆಗಾಗಿ 143 ಕೋಟಿ ಎಲ್‍ಇಡಿ ವಿದ್ಯುತ್ ದೀಪಗಳನ್ನು ಉತ್ಪಾದಿಸಲಾಗಿದ್ದು, ಇವುಗಳ ಬಳಕೆಯಿಂದಾಗಿ 50 ಸಾವಿರ ಕೋಟಿ ರೂ. ಮೌಲ್ಯದ ವಿದ್ಯುಚ್ಛಕ್ತಿ ಉಳಿತಾಯವಾಗಲಿದೆ ಎಂದು ವಿತ್ತ ಸಚಿವರು ತಿಳಿಸಿದರು.
ಐದು ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿಯಲ್ಲಿ 1.53 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 2014ಕ್ಕಿಂತ ಹೋಲಿಕೆ ಮಾಡಿದ್ರೆ ಮನೆಗಳ ನಿರ್ಮಾಣ ಐದು ಪಟ್ಟು ಹೆಚ್ಚಳವಾಗಿದೆ ಎಂದು ವಿತ್ತ ಸಚಿವರು ಸ್ಪಷ್ಟಪಡಿಸಿದರು.
ಬಡ ಮತ್ತು ಮಧ್ಯಮ ವರ್ಗದವರು ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳು ಲಭ್ಯವಾಗಲು 2018-19 ಅವಧಿಯಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಿದೆ. 2013-14ರಲ್ಲಿ ಕೇವಲ 92 ಕೋಟಿ ರೂ. ಖರ್ಚು ಮಾಡಲಾಗಿತ್ತು. ಮನರೇಗಾ ಯೋಜನೆಗಾಗಿ 60 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ.
ಬಡ ವರ್ಗದ ಜನರು ಸಹ ದೇಶದಲ್ಲಿರುವ ಸಂಸದರನ್ನು ಪ್ರಶ್ನಿಸಬಹುದು. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‍ಸಿ-ಎಸ್‍ಟಿ ಮತ್ತು ಓಬಿಸಿ ಕೋಟಾದಡಿ ಶೇ.10 ಮೀಸಲಾತಿ ನೀಡಲಾಗಿದೆ. ಇದರಿಂದ ಅಂದಾಜು 2 ಲಕ್ಷ ಸೀಟ್ ಗಳು ಲಭ್ಯವಾಗಲಿದೆ ಎಂದು ವಿತ್ತ ಸಚಿವರು ತಿಳಿಸಿದ್ರು.
2019-20 ಅವಧಿಗೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ರಸ್ತೆ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಗೆ 19 ಸಾವಿರ ಕೋಟಿ ಮೀಸಲು. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾರ್ಯ ಐದು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ 15,500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು.
2013-14ರಲ್ಲಿ ರಸ್ತೆ ಕಾಮಗಾರಿ ಪ್ರತಿ ದಿನ 69 ಕಿ.ಮೀ. ನಡೆಯುತ್ತಿತ್ತು. 2014-15ರಿಂದ ಪ್ರತಿದಿನ 100 ಕಿ.ಮೀ.ನಷ್ಟು ಕಾಮಗಾರಿ ನಡೆಯುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv