– ಆರೋಪ ನಿರಾಕರಿಸಿದ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ
ಬೆಂಗಳೂರು: ಒಂದು ಕಡೆ ವಿಧಾನ ಸಭೆಯಲ್ಲಿ ಶಾಸಕರಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದರೆ, ಇನ್ನೊಂದು ಕಡೆ ವಿಧಾನಸೌಧದ ಹೊರಗಡೆ ಬಿಜೆಪಿ ಆಪರೇಷನ್ ಫ್ಲವರ್ ರನ್ನು ಶುರುಮಾಡಿದೆ.
ಕಳೆದ ದಿನ ಜನಾರ್ದನ ರೆಡ್ಡಿ ಆಮಿಷ ಒಡ್ಡಿರುವ ಆಡಿಯೋವನ್ನು ಕಾಂಗ್ರೆಸ್ ರಿಲೀಸ್ ಮಾಡಿತ್ತು. ಈಗ ವಿಧಾನ ಸೌಧದಲ್ಲಿ ಆಪರೇಷನ್ ಕಮಲದ ಮತ್ತೊಂದು ಆಡಿಯೋವನ್ನು ಕಾಂಗ್ರೆಸ್ ನಾಯಕ ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ. ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ಪತ್ನಿಗೆ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿಯವರು ಕರೆ ಮಾಡಿ ಕೋಟಿ ಕೋಟಿ ಆಫರ್ ನೀಡಿ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಬಿಎಸ್‍ವೈ ಆಪ್ತ ಎಂಎಲ್‍ಸಿ ಪುಟ್ಟಸ್ವಾಮಿ ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿ ಆಫರ್ ಕೊಟ್ಟಿದ್ದಾರೆ. 15 ಕೋಟಿ ರೂ. ಮತ್ತು ಮಂತ್ರಿ ಸ್ಥಾನದ ಆಫರ್ ಕೊಡುತ್ತೇವೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.
Advertisement
ಆಡಿಯೋದಲ್ಲಿ ಏನಿದೆ?: ಮೊದಲಿಗೆ ಪುಟ್ಟಸ್ವಾಮಿ ಹೆಬ್ಬಾರ್ ಪತ್ನಿಗೆ ಕರೆ ಮಾಡಿದ್ದಾರೆ. ಅದರಲ್ಲಿ 15 ಕೋಟಿ ರೂ. ಮತ್ತು ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ನಂತರ ಅವರ ಮಗನ ಗಣಿಗಾರಿಕೆಯ ಕೇಸ್ ನ್ನು ಕ್ಲೋಸ್ ಮಾಡಿಸುತ್ತೇನೆ. ನೀವು ಕೇಳಿದ ಇಲಾಖೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
Advertisement
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕರೆ ಮಾಡಿದ್ದು, ಸರ್ಕಾರ ನಮ್ಮ ಕೈಯಲ್ಲಿದೆ. ನಾವು ಮೋಸ ಮಾಡುವುದಿಲ್ಲ. ಸರ್ಕಾರ ಇರುವುದರಿಂದ ಒಬ್ಬರ ಭವಿಷ್ಯ ಹಾಳು ಮಾಡಿ. ನಮ್ಮ ಭವಿಷ್ಯವನ್ನು ನೋಡಿಕೊಳ್ಳುವುದಿಲ್ಲ. ಶಿವಾರಂ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಮೇಲೆ ಗಣಿಗಾರಿಕೆ ಕೇಸ್ ಇದೆ. ನಮ್ಮ ಪರವಾಗಿ ಬಂದರೆ ನಿಮ್ಮ ಮೇಲಿರುವ ಕೇಸ್ ಕ್ಲೋಸ್ ಮಾಡುತ್ತೇವೆ ಎಂದು ಆಮಿಷ ಒಡ್ಡಲಾಗಿದೆ.
Advertisement
ನನ್ನ ಧ್ವನಿಯಲ್ಲ: ಆಡಿಯೋ ಬಿಡುಗಡೆಯಾದ ಬಳಿಕ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಪುಟ್ಟಸ್ವಾಮಿ, ಆಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ. ನಾನು ಯಾರಿಗೂ ಕರೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನೊಂದು ಕಡೆ ಬಿಜೆಪಿ ಶಾಸಕರಾದ ಶ್ರೀರಾಮುಲು, ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ಮತಯಾಚನೆಗಳಿಸಲು ಕೊನೆ ಕ್ಷಣದ ರಣತಂತ್ರ ಹೆಣೆಯುತ್ತಿದ್ದಾರೆ.
ಉಗ್ರಪ್ಪನವರು ಮಾತನಾಡಿ, ಶ್ರೀರಾಮುಲು ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ಆಫರ್ ನೀಡಿದ್ದು, ಈ ಆಡಿಯೋವನ್ನು ಮಧ್ಯಾಹ್ನ ನಂತರ ಬಿಡುಗಡೆ ಮಾಡುತ್ತೇವೆ. ಅಷ್ಟೇ ಅಲ್ಲದೇ ಸ್ವತಃ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಆಮಿಷ ಒಡ್ಡಿ ಮಾತನಾಡಿರುವ ಆಡಿಯೋ ಇದೆ. ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.