ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದ ಬಳಿಕ ಬಿಎಸ್‍ವೈ ಹಾಗೂ ನಳಿನ್ ಮಧ್ಯೆ ವೈಮನಸ್ಸು ಇದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ನಾವಿಬ್ಬರೂ ಫ್ರೆಂಡ್ಸ್. ಇಬ್ಬರೂ ಸರ್ಕಾರ ಹಾಗೂ ಪಕ್ಷದ ಕುರಿತು ಚರ್ಚೆ ನಡೆಸಿಯೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳುವ ಮೂಲಕ ಅಂತೆಕಂತೆಗಳಿಗೆ ಬಿಎಸ್‍ವೈ ತೆರೆ ಎಳೆದಿದ್ದಾರೆ.
Advertisement
ಬಿಜೆಪಿ ಸರ್ಕಾರ ಇಂದಿಗೆ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ವಿಚಾರಕ್ಕೆ ಸಿಎಂ ಪ್ರತಿಕ್ರಿಯಿದ್ದಾರೆ. ನಳಿನ್ ಕುಮಾರ್ ಕಟೀಲ್ ಹಾಗೂ ನಾನು ಒಟ್ಟಾಗಿ ಒಂದಾಗಿ ಕೂತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. 15 ದಿನಕ್ಕೊಮ್ಮೆ ಕೋರ್ ಕಮಿಟಿ ಸಭೆ ಕರೆದು ಅಲ್ಲಿ ಸರ್ಕಾರ ಏನು ಮಾಡುತ್ತಿದೆ? ಪಕ್ಷ ಏನು ಮಾಡುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎಂದರು.
Advertisement
ಸುಮ್ನೆ ಅಲ್ಲೊಂದು ಇಲ್ಲೊಂದು ಸುದ್ದಿ ಬರುತ್ತಿರುವುದನ್ನು ಜನ ನಂಬುವ ಅಗತ್ಯವಿಲ್ಲ. ಯಾವುದೇ ಸಣ್ಣ ಭಿನ್ನಾಭಿಪ್ರಾಯವೂ ಇಲ್ಲದೆ ಅಧ್ಯಕ್ಷರು ಹಾಗೂ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಊಹಾಪೋಹಗಳನ್ನು ತಳ್ಳಿ ಹಾಕಿದರು.
Advertisement
Advertisement
ಇದೇ ವೇಳೆ ಪಕ್ಷದಲ್ಲಿ ನಿಮ್ಮನ್ನು ತುಳಿಯುವಂತಹ ಪ್ರಯತ್ನವಾಗುತ್ತಿದೆ. ಅಧ್ಯಕ್ಷರು ಮತ್ತು ನಿಮ್ಮ ನಡುವೆ ಹೊಂದಾಣಿಕೆಯಿಲ್ಲ ಅಂತಾರೆ. ಪಕ್ಷದ ಕಚೇರಿಯಲ್ಲೇ ಲಿಂಗಾಯತ ಸಮುದಾಯದ ಬೆಂಬಲಿಗರನ್ನು ದೂರ ಇಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಿಜೆಪಿ ಕಚೇರಿಯಲ್ಲಿ ಯಾರನ್ನು ಇಟ್ಟುಕೊಳ್ಳಬೇಕು. ಯಾರನ್ನು ಇಟ್ಟುಕೊಳ್ಳಬಾರದು ಎಂಬುದು ರಾಜ್ಯದ ಅಧ್ಯಕ್ಷರ ಜವಾಬ್ದಾರಿಯಾಗಿದೆ. ನಾನು ಬಂದಾಗ ನನಗೆ ಬೇಕಾದವರನ್ನು ಇಟ್ಟುಕೊಳ್ಳುತ್ತೇನೆ. ಈ ಬಗ್ಗೆ ಜನ ಗೊಂದಲಕ್ಕೀಡಾಗುವ ಅಗತ್ಯವೇ ಇಲ್ಲ. ರಾಜ್ಯದ ಅಧ್ಯಕ್ಷರು ಹೊಸ ವ್ಯವಸ್ಥೆಯಲ್ಲಿ ಅವರಿಗೆ ಅನುಕೂಲಕರವಾದ ರೀತಿಯಲ್ಲಿ ಬೇಕಾದವರ ಮೇಲೆ ವಿಶ್ವಾಸ ಇಟ್ಟುಕೊಳ್ಳುತ್ತಾರೆ. ಯಾರನ್ನು ಬಿಟ್ಟಿದ್ದಾರೆಯೋ ಅವರಿಗೂ ಬೇರೆ ವ್ಯವಸ್ಥೆ ಮಾಡುವುದಾಗಿ ಸಿಎಂ ತಿಳಿಸಿದರು.