ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಪರ ಮೃದು ಧೋರಣೆ ಪ್ರದರ್ಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಎಚ್‍ಡಿಕೆ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಪದವಿ ಸಿಗೋದಕ್ಕೆ ಕಾರಣ ಕರ್ತರಾದ ಸಿದ್ದರಾಮಯ್ಯರನ್ನು ಎಚ್‍ಡಿಕೆ ಕಡೆಗಣಿಸಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಸಿದ್ದರಾಮಯ್ಯರನ್ನು ಸರಿಯಾಗಿ ಮಾತನಾಡಿಸಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಹೇಳಿಕೆಗಳನ್ನು ನೀಡುವ ಮೂಲಕ ಬಿಎಸ್‍ವೈ ಕಾಂಗ್ರೆಸ್ ಜೆಡಿಎಸ್ ನಡುವೆ ಬಿರುಕು ಮೂಡಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
Advertisement
ಸಾಣೇಹಳ್ಳಿ ಶ್ರೀಗಳ ವಿರುದ್ಧ ಎಚ್‍ಡಿಕೆ ಮಾತನಾಡಿದ್ದಕ್ಕೆ ಯಡಿಯೂರಪ್ಪ ಗರಂ ಆಗಿದ್ದು, ಸ್ವಾಮೀಜಿಗಳು ಅವರ ಅನಿಸಿಕೆಗಳನ್ನು ಹೇಳಿದ್ದಾರೆ. ಅದಕ್ಕಾಗಿ ನೀವು ಅವರನ್ನು ರಾಜಕೀಯ ಮಾಡಲು ಬನ್ನಿ ಎಂದು ಕರೆದಿದ್ದು ಆ ಸಮಾಜದ ಜನಾಂಗಕ್ಕೆ ನೋವುಂಟು ಮಾಡಿದೆ ಎಂದು ಎಚ್‍ಡಿಕೆ ವಿರುದ್ಧ ಕಿಡಿ ಕಾರಿದ್ದಾರೆ.
Advertisement
ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಅವರನ್ನು ಬೆಂಬಲಿಸಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲಿ ಮನವಿ ಮಾಡುತ್ತೇನೆ. ಬಹುಮತ ಸಾಬೀತು ವೇಳೆ ಬಿಜೆಪಿಯಿಂದ ಕಲಾಪ ಬಹಿಷ್ಕಾರ ಇಲ್ಲ ಎಂದು ಅವರು ತಿಳಿಸಿದರು.
Advertisement
Advertisement
ಬಿಎಸ್ ಯಡಿಯೂರಪ್ಪ ಬುಧವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಕುಮಾರಸ್ವಾಮಿಯವರ ನಡೆಯನ್ನು ಖಂಡಿಸಿದ್ದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸುದ್ದಿಗೋಷ್ಟಿಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಹೇಳಿಕೆಯ ಕುರಿತಾದ ನಿಮ್ಮ ಹೇಳಿಕೆ ದುರದೃಷ್ಟಕರ ಹಾಗೂ ಆಘಾತಕಾರಿ. ನಾಡಿನ ಸಮಸ್ತ ಮಠಾಧೀಶರು ಹಾಗೂ ಸ್ವಾಮೀಜಿಗಳಿಗೆ ಮಾಡಿದ ಅಪಮಾನ ಹಾಗೂ ಅಗೌರವ ಅಕ್ಷಮ್ಯ ಅಪರಾಧ. ನಾಡಿಗೆ ಮಾರ್ಗದರ್ಶನ ನೀಡುವ ಸ್ವಾಮೀಜಿಗಳ ಬಗ್ಗೆ ತಾವು ಬಹಳ ಹಗುರವಾಗಿ ಅವರನ್ನು “ರಾಜಕೀಯಕ್ಕೆ ನೇರವಾಗಿ ಬನ್ನಿ” ಎಂದು ಕರೆ ಕೊಡುವುದರ ಮೂಲಕ ತಮ್ಮ ಉದ್ಧಟತನ ಮತ್ತು ದುರಂಹಕಾರದ ಪರಮಾವಧಿಯನ್ನು ಪ್ರದರ್ಶಿಸಿದ್ದಿರಿ ಎಂದು ಕಿಡಿಕಾರಿದ್ದರು.
ನಿಮ್ಮ ಹೇಳಿಕೆ ಇಡೀ ನಾಡಿನ ಹಾಗೂ ರಾಜ್ಯದ ಗುರು ಪರಂಪರೆಗೆ ಮತ್ತು ಗುರು ಪರಂಪರೆಯಲ್ಲಿ ನಂಬಿಕೆ ಇಟ್ಟ ಸಮಗ್ರ ಜನತೆಗೆ ನೀವು ಮಾಡಿದ ದ್ರೋಹ. ರಾಜ್ಯದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ. ಈಗಾಲಾದರೂ ತಮ್ಮನ್ನು ತಾವು ತಿದ್ದಿಕೊಂಡು ಪರಿಸ್ಥಿತಿ ಕೈ ಮೀರುವ ಮೊದಲು ಸಮಸ್ತ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಎಸ್‍ವೈ ಆಗ್ರಹಿಸಿದ್ದರು.
ಚೊಚ್ಚಲ ಸುದ್ದಿಗೋಷ್ಠಿಯಲ್ಲಿ ಎಚ್‍ಡಿಕೆ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿಗಳಾದ ಶ್ರೀ ಜಿ. ಪರಮೇಶ್ವರ್‍ರವರನ್ನು ನಿರ್ಲಕ್ಷಿಸಿ ತಾವೇ ಏಕಾಂಗಿಯಾಗಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ನಾಡಿಗೆ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ನಿಮ್ಮ ಮಿತ್ರ ಪಕ್ಷದಲ್ಲಿ ನಿಮಗೆ ವಿಶ್ವಾಸ, ನಂಬಿಕೆ ಇಲ್ಲ ಎಂಬುದು ನಾಡಿನ ಜನತೆಗೆ ತೋರ್ಪಡಿಸಿದ್ದೀರಿ. ನಿಮ್ಮ ಈ ಅಪವಿತ್ರ ಮೈತ್ರಿಯ ಸರ್ಕಾರದಿಂದ ರಾಜ್ಯದ ಜನತೆ ನಿಮ್ಮಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ಕಾಂಗ್ರೆಸ್‍ನವರಿಗೆ ಒಂದು ಕಿವಿ ಮಾತು, ಅದೇನೆಂದರೆ ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದರೆ ಈಗಲೇ ನೀವು ಹೊರನಡೆಯಬೇಕು ಎಂದು ಹೇಳಿದ್ದರು.