ಮಂಡ್ಯ: ಸುಮಲತಾ ಅಂಬರೀಶ್ ಬೆನ್ನಲ್ಲೇ ಮಂಡ್ಯ ಜಿಲ್ಲಾಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಎಸ್‍ಪಿ ಅಭ್ಯರ್ಥಿ ಕಂಪ್ಲೆಂಟ್ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ನಂಜುಂಡಸ್ವಾಮಿ ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರ ವಿರುದ್ಧ ದೂರು ನೀಡಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾದ ನನಗೆ ಮತಯಂತ್ರದಲ್ಲಿ ಕ್ರಮಸಂಖ್ಯೆ 1 ನೀಡಬೇಕಿತ್ತು. ಆದರೆ ನನಗೆ ಕ್ರಮಸಂಖ್ಯೆ ಎರಡನ್ನ ನೀಡಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಕ್ರಮಸಂಖ್ಯೆ 1 ನ್ನು ನೀಡಲಾಗಿದೆ. ಡಿಸಿಯವರು ಜೆಡಿಎಸ್ ಪಕ್ಷದ ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಂಡ್ಯ ಡಿಸಿಯನ್ನ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಂಜುಂಡಸ್ವಾಮಿ, ನನಗೆ ಮತಯಂತ್ರದಲ್ಲಿ ಮೊದಲನೇ ನಂಬರ್ ಸಿಗಬೇಕಿತ್ತು. ಆದರೆ ನನ್ನನ್ನು ಎರಡನೇ ನಂಬರಿಗೆ ತಳ್ಳಿದ್ದಾರೆ. ಹೀಗಾಗಿ ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದ್ದಕ್ಕೆ ರಾಷ್ಟ್ರೀಯ ಪಕ್ಷವಾದರೂ ಸ್ಥಳೀಯ ಪಕ್ಷದ ಜೊತೆ ಸೇರಿಸಿ ಕ್ರಮ ಸಂಖ್ಯೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ನನ್ನ ಹೆಸರು ಎನ್ ಆಗಿದೆ. ಹೀಗಾಗಿ ನನಗೆ ಮೊದಲನೇ ಸ್ಥಾನ ಕಡ್ಡಾಯವಾಗಿ ಕೊಡಬೇಕಿತ್ತು. ಇದರಿಂದ ನಾನು ವಂಚಿತನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಡಿಸಿ ಆಡಳಿದ ಬಗ್ಗೆ ನಾನು ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದೇನೆ.
ಈಗಾಗಲೇ ಸುಮಲತಾ ಅಂಬರೀಶ್ ಪರ ಏಜೆಂಟ್ ಅವರು ಕೂಡ ಮಂಡ್ಯ ಜಿಲ್ಲಾಧಿಕಾಯನ್ನು ವರ್ಗಾವಣೆ ಮಾಡಿ ಬೇರೆ ಡಿಸಿಯನ್ನು ಹಾಕಿಕೊಡಿ ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೆ ಈಗ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ನಂಜುಂಡಸ್ವಾಮಿ ಮಂಡ್ಯ ಡಿಸಿ ಎನ್. ಮಂಜುಶ್ರೀ ಅವರ ವಿರುದ್ಧ ದೂರು ನೀಡಿದ್ದಾರೆ.