ರಾಮನಗರ: ಕಡೆಗೂ ಬಿಎಸ್‍ಪಿ ಶಾಸಕ ಎನ್.ಮಹೇಶ್ ತಮ್ಮ ನಿಲುವನ್ನು ಪ್ರಕಟಿಸಿದ್ದು, ಸಮಿಶ್ರ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಮ್ಮಿಶ್ರ ಸರ್ಕಾರದ ಒಂದು ಭಾಗವಾಗಿದ್ದೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರ ಆದೇಶದ ಮೇಲೆ ಸಮಿಶ್ರ ಸರ್ಕಾರದ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು. ಬಿಜೆಪಿ ಸೇರಿ 3 ಪಕ್ಷಕ್ಕೂ ನೀವು ಸ್ವತಂತ್ರವಾಗಿರಿ ಎಂದು ಮಾಯಾವತಿ ಅವರು 15 ದಿನಗಳ ಹಿಂದೆಯೇ ಹೇಳಿದ್ದಾರೆ ಎಂದು ತಿಳಿಸಿದರು.
ನನಗೆ ಪ್ರತ್ಯೇಕ ಆಸನ ಕೊಡುವಂತೆ ಸ್ಪೀಕರ್‍ಗೆ ಮನವಿ ಮಾಡಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರಕ್ಕೆ ನಾನು ವಿಷಯಾಧಾರಿತ ಬಾಹ್ಯ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಸಂಜೆಯವರೆಗೂ ಮಹೇಶ್ ಅವರು ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಇಂದು ರಾತ್ರಿ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಮಾಯಾವತಿ ಅವರ ತೀರ್ಮಾನವೇ ಅಂತಿಮ. ಸದನಕ್ಕೆ ಹಾಜರಾಗುತ್ತೇನೆ. ಮತ ಯಾರಿಗೆ ಹಾಕಬೇಕು ಎಂಬುದನ್ನು ಮಾಯಾವತಿಯವರು ತೀರ್ಮಾನಿಸುತ್ತಾರೆ. ಅವರ ಸೂಚನೆಯಂತೆ ನಾಳೆ ಮತ ಹಾಕುತ್ತೇನೆ ಎಂದು ಹೇಳಿದ್ದರು. ಇದೀಗ ಅಂತಿಮವಾಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ.
ಅತೃಪ್ತ ಶಾಸಕರು ರಾಜೀನಾಮೆ ನೀಡಿದ ಆರಂಭದಲ್ಲಿ ನಾನು ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದರು. ಆದರೆ, ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಿ, ನಾನು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ. ನನಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಸ್ಪೀಕರ್‍ಗೆ ಮನವಿ ಮಾಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದರು. ಇದೀಗ ನಾಳೆಯೇ ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚಿಸಬೇಕಿದ್ದು, ಸಂಜೆಯವರೆಗೂ ಎನ್.ಮಹೇಶ್ ನಡೆ ನಿಗೂಢವಾಗಿತ್ತು.
ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎನ್.ಮಹೇಶ್, ನಾನೀಗ ತಾಂತ್ರಿಕವಾಗಿ ಸಮ್ಮಿಶ್ರ ಸರ್ಕಾರದ ಭಾಗವಾಗಿಲ್ಲ, ವಿರೋಧ ಪಕ್ಷದಲ್ಲಿದ್ದೇನೆ. ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಹೇಳಿದರೆ ಖಂಡಿತ ಬಿಜೆಪಿಗೆ ಬೆಂಬಲ ನೀಡುತ್ತೇನೆ. ನಾನು ಬಿಎಸ್‍ಪಿಯ ಕಟ್ಟಾ ಕಾರ್ಯಕರ್ತ, ಬಿಎಸ್‍ಪಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಬಿಎಸ್‍ಪಿ ಪಕ್ಷ ತೊರೆದು ಬಿಜೆಪಿಗೆ ಹೋಗುವುದು ಕೇವಲ ವದಂತಿಯಷ್ಟೇ ಎಂದು ಹೇಳಿದ್ದರು.