Connect with us

Bengaluru City

75 ವರ್ಷ ತುಂಬಿದವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್‍ವೈ ಉತ್ತರಿಸಿದ್ದು ಹೀಗೆ

Published

on

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರೇ ಕರ್ನಾಟಕದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದ್ರೆ ಬಿಜೆಪಿಯಲ್ಲಿ 75 ವರ್ಷ ವಯಸ್ಸು ತುಂಬಿದವರಿಗೆ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್ ಯಡಿಯೂರಪ್ಪ ಇಂದು ಉತ್ತರಿಸಿದ್ದಾರೆ.

ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಬಿಎಸ್‍ವೈ, ನನಗೆ ಈಗ 73 ವರ್ಷ ತುಂಬಿ 74 ವರ್ಷಕ್ಕೆ ಕಾಲಿಡುತ್ತಿದ್ದೇನೆ. ನಾವು ಅಧಿಕಾರಕ್ಕೆ ಬರುವಾಗ 75ನೇ ವರ್ಷಕ್ಕೆ ಕಾಲಿಡುತ್ತೇನೆ. ಯಾವ ಸಮಸ್ಯೆ, ಗೊಂದಲ ನಮ್ಮಲ್ಲಿ ಇಲ್ಲ. 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಹೆಸರು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ರು.

ನಾನು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ. ಎಲ್ಲರ ಆಪೇಕ್ಷೆಯೂ ಅದೇ ಇದೆ. 150 ಸ್ಥಾನ ಗೆಲ್ಲುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಹಾಗಾಗಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಉದ್ಭವಿಸಲ್ಲ. ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿ, ಅಮಿತ್ ಶಾ ಅವರ ಸ್ಟ್ರ್ಯಾಟಜಿಯಿಂದಲೇ ಉತ್ತರಪ್ರದೇಶದಲ್ಲಿ ಜಯ ಗಳಿಸಿದ್ದು. ಇಲ್ಲಿಯೂ ಅದೇ ಸ್ಟ್ರಾಟಜಿ ಮಾಡುತ್ತಿದ್ದಾರೆ. ಇಬ್ಬರೂ ಕುಳಿತೇ ಅಭ್ಯರ್ಥಿಗಳನ್ನ ಫೈನಲ್ ಮಾಡ್ತೇವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲರ ಸಲಹೆ ಪಡೆಯುತ್ತೇನೆ. ಮೂರ್ನಾಲ್ಕು ಮಂದಿಯಿದ್ದರೆ ಸರ್ವೆ ಮಾಡಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಈಗಾಗಲೇ 150 ಅಭ್ಯರ್ಥಿಗಳನ್ನ ಗುರುತಿಸಿದ್ದೇವೆ. ಉಳಿದ ಕಡೆ ಜಿಲ್ಲಾ ನಾಯಕರ ಸಲಹೆ ಪಡೆದು ಅಭ್ಯರ್ಥಿ ಹಾಕುತ್ತೇವೆ. ಮಿಷನ್ 150 ಗುರಿ ನಮ್ಮದು. ಆ ಗುರಿಯನ್ನ ನಾವು ತಲುಪುತ್ತೇವೆ. ನಾವು ಅಧಿಕಾರಕ್ಕೆ ಬಂದ ನಂತರ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಬಿಎಸ್‍ವೈ ಹೇಳಿದ್ರು.

ಇದೇ ವೇಳೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಲ್ಕು ವರ್ಷ. ನಾಲ್ಕು ವರ್ಷದ ಸಾಧನೆ ಭ್ರಷ್ಟಾಚಾರದಲ್ಲಿ ನಂ.1. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಲ್ಲಿ 2ನೇ ಸ್ಥಾನ. ಲೋಕಾಯುಕ್ತ ನಿಷ್ಕ್ರಿಯ ಮಾಡಿದ್ದೊಂದು ಸಾಧನೆ. ಸೇಡು ತೀರಿಸಿಕೊಳ್ಳಲು ಎಸಿಬಿ ರಚನೆ ಮಾಡಿದ್ರು. ಪ್ರಾಮಾಣಿಕ ಅಧಿಕಾರಿಗಳಿಗೆ ಉಸಿರುಗಟ್ಟುವ ಸ್ಥಿತಿ ಇದೆ. ಐಎಎಸ್ ಅಧಿಕಾರಿಗಳ ಸಾವಿನ ಪ್ರಕರಣಗಳು ನಡೆದಿವೆ. ಆಹಾರ ಇಲಾಖೆಯಲ್ಲಿ ಅಕ್ಕಿ ಖರೀದಿಯಲ್ಲಿ ದುರ್ಬಳಕೆಯಾಗಿ ಕೋಟ್ಯಾಂತರ ರೂ. ಲೂಟಿಯಾಗಿದೆ ಅಂತ ಆರೋಪಿಸಿದ್ರು.

ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡ್ರು. ಪುತ್ರನಿಗೆ ವಿಕ್ಟೋರಿಯಾ ಆವರಣದಲ್ಲಿ ಪಾಲುದಾರಿಕೆ ಸಂಸ್ಥೆಗೆ ಲ್ಯಾಬ್ ಸ್ಥಾಪನೆಗೆ ಅವಕಾಶ ಕೊಟ್ಟರು. ವಿಧಾನಸೌಧದಲ್ಲಿ ಕಡತಗಳು ನಾಪತ್ತೆಯಾದ್ವು
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಅಂದ್ರು.

ನಾನು ಸದ್ಯ 6 ಜಿಲ್ಲೆಯ ಪ್ರವಾಸ ಮುಗಿಸಿದ್ದೇನೆ. ಮತ್ತೆ ನಾಳೆಯಿಂದ ಪ್ರವಾಸ ಮುಂದುವರಿಸುತ್ತೇನೆ. ನಿತ್ಯ ಬೆಳಿಗ್ಗೆ ದಲಿತರ ಮನೆ ಕಾಲೋನಿಗೆ ಹೋಗ್ತಿದ್ದೇನೆ. ಬಹಳ ದಯನೀಯ ಸ್ಥಿತಿಯಲ್ಲಿ ಕಾಲೋನಿಗಳು ಇವೆ. ಸಿಎಂ ಹೆಲಿಕಾಪ್ಟರ್ ಬಿಟ್ಟು ಕೆಳಗೆ ಇಳಿದು ಅಲ್ಲಿಗೆ ಹೋಗಿ ಬನ್ನಿ. ಗೋಶಾಲೆಗಳಿಗೆ ಹೋದ್ರೆ ಸಾಕಷ್ಟು ಮೇವಿಲ್ಲ. ಏನು ಬಂದಿದೆ ನಿಮಗೆ ದರಿದ್ರ? ಎಂದು ಸಿದ್ದರಾಮಯ್ಯ ವಿರುದ್ಧ ಬಿಎಸ್ ವೈ ವಾಗ್ದಾಳಿ ನಡೆಸಿದ್ರು.

ಬರಗಾಲದ ವಿಚಾರದಲ್ಲಿ ರಾಜಕೀಯ ಮಾಡ್ತಾರೆ. ಪ್ರತಿಯೊಂದಕ್ಕೂ ಕೇಂದ್ರದ ಕಡೆ ಬೆರಳು ತೋರಿಸುತ್ತಾರೆ. 5,224 ಕೋಟಿ ರೂ. ಹಣ ಇಲ್ಲಿಯವರೆಗೆ ಕೇಂದ್ರದಿಂದ ಬಿಡುಗಡೆಯಾಗಿದೆ.
ಆದರೂ ಕೇಂದ್ರದ ವಿರುದ್ಧ ಹಗುರವಾಗಿ ಟೀಕೆ ಮಾಡುತ್ತಿದ್ದಾರೆ. ದಲಿತ ಕಾಲೋನಿಗೆ ಹೋಗಿದ್ದನ್ನೇ ರಾಜಕಾರಣ ಮಾಡುತ್ತಿದ್ದಾರೆ. ದಲಿತ ಸಮುದಾಯದ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ. ಹಿಂದೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಏನು ಮಾಡ್ತು ಅನ್ನೋದು ಗೊತ್ತು. ಜಗಜೀವನ್ ರಾಂ ಅವರಿಗೆ ಏನ್ ಮಾಡಿದ್ರು ಅನ್ನೋದು ಗೊತ್ತು. ಅದನ್ನೆಲ್ಲ ಜನರಿಗೆ ಹೇಳುತ್ತಿದ್ದೇನೆ ಅಂದ್ರು.

ರೈತರ ಸಾಲ ಮನ್ನಾ ಮಾಡಬೇಕು. ಜುಲೈ ವೇಳೆಗೆ ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ 4 ಲಕ್ಷ ರೈತರನ್ನ ಕರೆಸಿ ಪ್ರತಿಭಟನೆ ಮಾಡುತ್ತೇನೆ ಅಂತ ಎಚ್ಚರಿಕೆ ನೀಡಿದ್ರು. ಇನ್ನು ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧ ವಿಚಾರದಲ್ಲಿ ಮೋದಿಯವರ ನಿರ್ಧಾರ ಸ್ವಾಗತಿಸುತ್ತೇನೆ ಅಂದ್ರು.

ಜಂತಕಲ್ ಮೈನಿಂಗ್ ಹಗರಣ ಪ್ರಕರಣದಲ್ಲಿ ಬಿಎಸ್‍ವೈ ನನ್ನ ಮೇಲೆ ಕೇಸ್ ಹಾಕಿಸಿದ್ದು ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್‍ವೈ, ನಾನು ಸಿಎಂ ಆಗಿದ್ದಾಗಲೇ ಹಗರಣದ ಬಗ್ಗೆ ಪುಸ್ತಕ ಮಾಡಿ ಹಂಚಿದ್ದೆ. ಅದು ಈಗ ಮಾಡಿದ್ದಲ್ಲ. ಕುಮಾರಸ್ವಾಮಿ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮೇಲೆ ಆರೋಪದ ಪ್ರತಿ ನಮ್ಮ ಆಫೀಸ್‍ನಲ್ಲಿ ರೆಡಿ ಆಗಿದೆ ಅನ್ನೋದು ಸುಳ್ಳು. ಅಂದು ರೈತರ ಸಾಲ ಮನ್ನಾಕ್ಕೆ ವಿರೋಧಿಸಿದ್ದು ನಿಜ. ಆಗ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆ ಬಳಿಕ ಎರಡೆರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೇವೆ ಅಂದ್ರು.

Click to comment

Leave a Reply

Your email address will not be published. Required fields are marked *