ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಾಲಕನೊಬ್ಬನನ್ನು ದತ್ತು ಪಡೆದು ಕೊನೆವರೆಗೂ ವಿದ್ಯಾಭ್ಯಾಸ ಕೊಡಿಸುವುದಾಗಿ ಮಾತು ಕೊಟ್ಟಿದ್ದರು. ಆದ್ರೆ ಅರ್ಧಕ್ಕೆ ಓದಿಸಿ ಈಗ ಫೀಸ್ ಕೂಡಾ ಕಟ್ಟದೇ ನಡು ನೀರಲ್ಲಿ ಕೈ ಬಿಟ್ಟಿದ್ದಾರೆ.
7 ವರ್ಷಗಳ ಹಿಂದೆ ತಾವು ಸಿಎಂ ಆಗಿದ್ದಾಗ ಬೆಂಗಳೂರಿನ ಬ್ಯಾಟರಾಯನಪುರದ ವಿಶ್ವನಾಥ್ ಎಂಬ ಬಾಲಕ ಗಾಳಿ ಆಂಜನೇಯ ದೇವಸ್ಥಾನದ ಬಳಿ ಅಳುತ್ತಾ ನಿಂತಿದ್ದ. ಯಾದಗಿರಿ ಮೂಲದ ಬಸವರಾಜು ಮತ್ತು ಶಿವಮ್ಮ ದಂಪತಿಯ ಈ 10 ವರ್ಷದ ಮಗನನ್ನು ಬಿಎಸ್‍ವೈ ದತ್ತು ಪಡೆದಿದ್ರು. ಬಾಲಕನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡ್ತೀನಿ ಅಂತಾ ದೇವರ ಮುಂದೆ ಪ್ರಮಾಣ ಮಾಡಿದ್ರು.
ಆಮೇಲೆ ತಮ್ಮ ಆಪ್ತ ಸಿದ್ದಲಿಂಗಸ್ವಾಮಿಗೆ ಹೇಳಿ ಮೈಸೂರಿನ ಜೆಎಸ್‍ಎಸ್ ವಿದ್ಯಾಪೀಠದಲ್ಲಿ ಐದನೇ ತರಗತಿಯಿಂದ 9ನೇ ತರಗತಿವರೆಗೂ ಓದಿಸಿದ್ದಾರೆ. ಆದರೆ 10ನೇ ತರಗತಿಗೆ ಬಂದಾಗ ಪರೀಕ್ಷೆ ಶುಲ್ಕ ಕಟ್ಟದೇ ಬೇಜವಾಬ್ದಾರಿ ತೋರಿದ್ದಾರೆ. ಆದ್ರೂ ಹೇಗೋ ಕಷ್ಟಪಟ್ಟು ವಿಶ್ವನಾಥ್ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿಕೊಂಡಿದ್ದಾನೆ. ನಂತರ ಪಿಯುಸಿ ಓದಬೇಕು ಸಹಾಯ ಮಾಡಿ ಸಾರ್ ಅಂತಾ ಮನೆ ಬಾಗಿಲಿಗೆ ಹೋದ್ರೆ ಬಿಎಸ್‍ವೈ ಆಪ್ತ ಸಿದ್ದಲಿಂಗಸ್ವಾಮಿ, ಏನಿದ್ರೂ ಯಡಿಯೂರಪ್ಪ ಅವರನ್ನ ಕೇಳಿಕೋ. ನನ್ನ ಹತ್ರ ಬರಬೇಡಿ ಅಂತಾ ಬೈದು ಕಳಿಸಿದ್ದಾರಂತೆ.
ಇಷ್ಟೆಲ್ಲಾ ಆದ್ಮೇಲೆ ಬಾಲಕನ ಪೋಷಕರು ಬಿಎಸ್‍ವೈ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹೋಗಿದ್ದಾರೆ. ಆದರೆ ಬಿಎಸ್‍ವೈ ಬೆಂಬಲಿಗರು ಭೇಟಿ ಮಾಡಲು ಅವಕಾಶ ಕೊಡದೇ ವಾಪಸ್ ಕಳಿಸಿದ್ದಾರೆ.