ಬೆಂಗಳೂರು: ಕಳೆದ 4 ವರ್ಷಗಳಿಂದ ವಾಸವಾಗಿದ್ದ ಕುಮಾರ ಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಕಾವೇರಿಯನ್ನು (Cauvery) ಮಾಜಿ ಸಿಎಂ ಯಡಿಯೂರಪ್ಪ (Yediyurappa) ಇಂದು ತೊರೆದಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಕಾರಣ ಸರ್ಕಾರಿ ನಿವಾಸವನ್ನು ಬಿಎಸ್‌ವೈ ಖಾಲಿ ಮಾಡಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಖಾಸಗಿ ನಿವಾಸ ಧವಳಗಿರಿಗೆ (Dhavalagiri) ಯಡಿಯೂರಪ್ಪ ಶಿಫ್ಟ್ ಆಗಿದ್ದಾರೆ.
Advertisement
ಬಿಎಸ್‌ವೈ 2019 ರಲ್ಲಿ ಸಿಎಂ ಆದಾಗ ಇದೇ ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ (Siddaramaiah) ಆರು ತಿಂಗಳವರೆಗೂ ನಿವಾಸ ಖಾಲಿ ಮಾಡಿರಲಿಲ್ಲ. ಆದರೆ ಆರು ತಿಂಗಳು ಕಾಯಿಸಿದ್ದ ಸಿದ್ದರಾಮಯ್ಯ ಸಿಎಂ ಆದ ನಂತರ ಯಡಿಯೂರಪ್ಪನವರು ತಡ ಮಾಡದೇ ಕೇವಲ 11 ದಿನಗಳಲ್ಲೇ ಕಾವೇರಿ ನಿವಾಸವನ್ನು ತೆರವು ಮಾಡಿದ್ದಾರೆ.
Advertisement
Advertisement
ಬಿಎಸ್‌ವೈ ಮನೆ ತೊರೆದ ಹಿನ್ನೆಲೆಯಲ್ಲಿ ಇನ್ನು ಮುಂದೆ ರಾಜ್ಯ ಬಿಜೆಪಿಯ ರಾಜಕೀಯ ಚಟುವಟಿಕೆ ಕೇಂದ್ರವಾಗಿ ಧವಳಗಿರಿ ನಿವಾಸ ಮಾರ್ಪಾಡಾಗಲಿದೆ. ಬಿಜೆಪಿ ನಾಯಕರು (BJP Leaders) ಇನ್ಮುಂದೆ ಧವಳಗಿರಿ ನಿವಾಸಕ್ಕೆ ಭೇಟಿ ನೀಡಲಿದ್ದು, ಪ್ರಮುಖ ಸಭೆಗಳು ಧವಳಗಿರಿಯಲ್ಲೇ ನಡೆಯಲಿವೆ.
Advertisement
ಸಿದ್ದರಾಮಯ್ಯ ಅವರಿಂದ ಯಡಿಯೂರಪ್ಪ ಪಾಲಾಗಿದ್ದ ಕಾವೇರಿ ಮತ್ತೆ ಇದೀಗ ಸಿದ್ದರಾಮಯ್ಯ ವಶಕ್ಕೆ ಸಿಕ್ಕಂತಾಗಿದೆ. ಕೆಲವೊಂದು ಸಣ್ಣಪುಟ್ಟ ದುರಸ್ತಿ ಹಾಗೂ ಮನೆಗೆ ಪೇಂಟಿಂಗ್ ಮಾಡಿಸಿಕೊಂಡು ಸದ್ಯವೇ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಲಿದ್ದಾರೆ. ಇದನ್ನೂ ಓದಿ: 20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS
ಅದೃಷ್ಟದ ಮನೆ:
ಕಾವೇರಿ ನಿವಾಸವನ್ನು ರಾಜಕೀಯ ವಲಯದಲ್ಲಿ ಅದೃಷ್ಟದ ನಿವಾಸ ಎಂದು ಕರೆಯಲಾಗುತ್ತಿದೆ. 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿಎಸ್‌ವೈ ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ ಕಾವೇರಿ ನಿವಾಸ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸರ್ಕಾರದ ಪತನವಾದ ಬಳಿಕ 2013ರಲ್ಲಿ ಸಿದ್ದರಾಮಯ್ಯ ಈ ಮನೆಗೆ ತೆರಳಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಯಡಿಯೂರಪ್ಪ ಈ ಮನೆಗೆ ತೆರಳಲು ಬಯಸಿದ್ದರು. ಆದರೆ ಸಿದ್ದರಾಮಯ್ಯ ಮನೆ ತೊರೆಯಲು ಒಪ್ಪಿರಲಿಲ್ಲ.
ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವೆ `ಕಾವೇರಿ’ ಜಟಾಪಟಿ ತಾರಕಕ್ಕೆ ಏರಿತ್ತು. ಕೊನೆಗೆ ಡಿಪಿಎಆರ್ ಸಿಬ್ಬಂದಿ ನಿವಾಸದಲ್ಲಿದ್ದ ಸಿದ್ದರಾಮ್ಯಯ ಹೆಸರಿನ ಬೋರ್ಡ್ ತೆರವುಗೊಳಿಸಿದ್ದರು. ಈ ಮೂಲಕ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ ಮೂರ್ನಾಲ್ಕು ದಿನಗಳಲ್ಲಿ ನಿವಾಸ ಖಾಲಿ ಮಾಡದೇ ಇದ್ದಲ್ಲಿ ನೀರಿನ ಸಂಪರ್ಕವನ್ನು ಸಹ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಎಚ್ಚರಿಕೆಯ ಬಳಿಕ ಸಿದ್ದರಾಮಯ್ಯ ಕಾವೇರಿ ನಿವಾಸವನ್ನು ತೊರೆದಿದ್ದರು.
ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿ ಆ ಮನೆ ಮಹತ್ವದ ಪಾತ್ರ ವಹಿಸಿದೆ. 2019ರಲ್ಲಿ ವಿಪಕ್ಷ ನಾಯಕನ ಸ್ಥಾನ ಸಿಕ್ಕಿತ್ತು. ಆದ್ದರಿಂದ ಕಾವೇರಿ ನಿವಾಸದಲ್ಲೇ ಮುಂದುವರಿದರೆ ಮತ್ತಷ್ಟು ರಾಜಕೀಯ ಉನ್ನತಿ ಸಿಗಬಹುದು ಎಂಬುದು ಸಿದ್ದರಾಮಯ್ಯ ಪತ್ನಿಯ ನಂಬಿಕೆ ಎಂದು ಹೇಳಲಾಗಿತ್ತು. ಇದರ ಜೊತೆ ಕಾವೇರಿ ಪಕ್ಕದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಇರುವುದರಿಂದ ಕಾವೇರಿಯಲ್ಲಿ ಸಿಎಂ ಇದ್ದರೆ ಓಡಾಟ ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕಾವೇರಿ ನಿವಾಸವನ್ನು ಸಿಎಂಗೆ ನೀಡಲಾಗಿದೆ.