ಹುಬ್ಬಳ್ಳಿ: ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜನಸ್ವರಾಜ ಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಸ್ವರಾಜ ಯಾತ್ರೆ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವೆ. ಒಟ್ಟು ನಾಲ್ಕು ಭಾಗಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ನಳಿನ್ ಕುಮಾರ್ ಕಟೀಲ್, ಮತ್ತೊಂದು ಕಡೆ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ
ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಬಹುಮತ ಪಡೆಯಬೇಕು ಎಂಬ ಅಪೇಕ್ಷೆ ಇದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ. ನಾವು ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾನು ಉತ್ತರ ಕನ್ನಡ ಮುಗಿಸಿ ಮತ್ತೆ ಹಾವೇರಿಗೆ ಹೋಗುತ್ತೇನೆ. ನಂತರ ಗದಗ, ಬಾಗಲಕೋಟೆ, ಬಿಜಾಪುರ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಎರಡು ಬಣವಾಗಿರುವ ಕುರಿತು ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಯಾವ ಪಕ್ಷದ ಬಗ್ಗೆಯೂ ಟೀಕೆ,ಟಿಪ್ಪಣಿಗಳನ್ನು ಮಾಡುವುದಿಲ್ಲ. ಕಾಂಗ್ರೆಸ್ ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮುಂದೆ ನೋಡೋಣ ಎಂದು ತಿಳಿಸಿದರು.
ಬಿಟ್ ಕಾಯಿನ್ ಮುಚ್ಚಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಕುರಿತು ಮಾತನಾಡಿದ ಅವರು, ಅದೆಲ್ಲ ಸುಳ್ಳು. ಈ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಪಕ್ಷದಲ್ಲಿ ಈ ಕುರಿತು ಯಾವುದೇ ದಾಖಲೆಗಳಿದ್ದರೂ ನಮಗೆ ಕೊಟ್ಟರೆ ಅವರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆ. ಯಾವುದನ್ನು ಮುಚ್ಚಿಡುವುದಿಲ್ಲ, ಯಾರನ್ನು ರಕ್ಷಣೆಯನ್ನು ಸಹ ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ ಕರೆ
ರಾಜ್ಯದ ಪ್ರವಾಹ ಕುರಿತು ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಈಗಾಗಲೇ ಸರ್ವೇ ಮಾಡಿಸುತ್ತಿದ್ದಾರೆ. ಈ ಕುರಿತು ಪರಿಹಾರ ಕೊಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಭೆಗಳನ್ನು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಬೆಳೆ ನಾಶವಾಗಿದೆ ಅವರಿಗೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.