ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

Public TV
2 Min Read
BSY

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಜೊತೆಗೆ ಮತ್ತಷ್ಟು ಬೆಳೆಸಬೇಕಿದೆ. ಹೀಗಾಗಿ ನನಗೆ ಯಾವುದೇ ಸ್ಥಾನಮಾನ ಇಲ್ಲದಿದ್ದರೂ, ನನ್ನ ಕೊನೆಯ ಉಸಿರು ಇರುವವರೆಗೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸ್ಥಾನ ಪಡೆದು ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು. ಇದನ್ನೂ ಓದಿ: ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

ಮುಂದಿನ 10-15 ದಿನಗಳ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ನಡೆಸುತ್ತೇನೆ. ಈ ಸಂಬಂಧ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ಪ್ರವಾಸ ನಡೆಸಲಿದ್ದೇನೆ. ನಾನು ಸಾಯುವವರೆಗೂ ಪಕ್ಷ ಸಂಘಟನೆ ಮಾಡುತ್ತೇನೆ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಸಿದ್ದರಾಮಯ್ಯರಿಂದ ಪ್ರಜಾತಂತ್ರಕ್ಕೆ ದ್ರೋಹ
ಕಾಂಗ್ರೆಸ್ ನವರು ಸದನದಲ್ಲಿ ಕೋವಿಡ್ ಬಗ್ಗೆ ಚರ್ಚೆ ನಡೆಸದೇ ವಿನಾಕಾರಣ ಸಭಾತ್ಯಾಗ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಒಳ್ಳೆಯ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿ ಪ್ರಜಾತಂತ್ರಕ್ಕೆ ದ್ರೋಹ ಎಸಗಿದ್ದಾರೆ. ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹರಿಹಾಯ್ದರು.

ಬೆಲೆ ಏರಿಕೆ ವಿಚಾರ ಒಂದನ್ನೇ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ಸಂಬಂಧಪಟ್ಟ ಸಚಿವರು ಸದನದಲ್ಲಿ ವಿಪಕ್ಷಗಳು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲು ಸಿದ್ಧರಿದ್ದರೂ ಕೇಳುವ ತಾಳ್ಮೆ ಇಲ್ಲದೇ ಪಲಾಯನ ಮಾಡಿದರು. ಸದನಕ್ಕೆ ಲೋಕಸಭಾ ಸ್ಪೀಕರ್ ಭೇಟಿ ನೀಡಿದ ಸಂದರ್ಭದಲ್ಲೂ ಸಭಾತ್ಯಾಗ ಮಾಡಿದರು. ಸ್ಪೀಕರ್ ಬಂದಾಗ ಗೌರವಯುತವಾಗಿ ನಡೆದುಕೊಳ್ಳಲಿಲ್ಲ. ಇದು ಪ್ರತಿಪಕ್ಷಕ್ಕೆ ಶೋಭೆ ತರುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ನಿಶ್ಚಿತ ಎಂದು ಭಾವಿಸಿರುವ ಕಾರಣ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನರೇ ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು. ಇದನ್ನೂ ಓದಿ: ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

ಭಾರತ್ ಬಂದ್ ಅವಶ್ಯವಿಲ್ಲ
ಜನತೆ ಮೊದಲೇ ಕೋವಿಡ್ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ಭಾರತ್ ಬಂದ್ ಅವಶ್ಯಕತೆ ಇಲ್ಲ. ಈಗಾಗಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಆದರೂ ಬಂದ್ ಕರೆ ನೀಡಿರುವುದು ಸರಿಯಲ್ಲ. ಬಂದ್ ಗೆ ಯಾರೂ ಬೆಂಬಲ ಕೊಡಬಾರದು ಎಂದು ಬಿಎಸ್ ವೈ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *