Bengaluru CityKarnatakaLatestLeading NewsMain PostShivamogga

ಹೈಕಮಾಂಡ್‍ಗೆ ಸೆಡ್ಡು ಹೊಡೆದ ಬಿಎಸ್‍ವೈ – ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಹಿಂದಿದೆ ಹಲವು ಲೆಕ್ಕಾಚಾರ

Advertisements

ಬೆಂಗಳೂರು: ರಾಜ್ಯ ಬಿಜೆಪಿ ಹಲವು ಸಂಚಲನಾತ್ಮಕ ವಿದ್ಯಮಾನಗಳಿಗೆ ಸಾಕ್ಷಿಯಾಗ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ ಘೋಷಣೆ ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಮುಂದಿನ ಸಲ ತಮ್ಮ ಕಿರಿಯ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಯಡಿಯೂರಪ್ಪ ಅವರ ಈ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ರಾಜ್ಯ ಬಿಜೆಪಿಯ ದಿಗ್ಗಜ ನಾಯಕ ಯಡಿಯೂರಪ್ಪ ಇಂದು ಹೈಕಮಾಂಡ್‍ಗೆ ಶಾಕ್ ಮೂಡಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಶಿಕಾರಿಪುರದಲ್ಲಿ ಮುಂದಿನ ಸಲ ತಾವು ನಿಲ್ಲಲ್ಲ, ತಮ್ಮ ಬದಲಾಗಿ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂಬ ಮಹದ್ಘೋಷಣೆಯನ್ನು ಯಡಿಯೂರಪ್ಪ ಮಾಡಿದ್ದಾರೆ. ತಮ್ಮ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಜೊತೆಗೆ ಮಗನ ರಾಜಕೀಯ ಭವಿಷ್ಯಕ್ಕೆ ತಮ್ಮ ಕ್ಷೇತ್ರವನ್ನೇ ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ‘ಮೆಂಟಲ್ ಹೆಲ್ತ್ ಇನೀಶಿಯೇಟಿವ್’ ಮೆಚ್ಚಿದ ಕೇಂದ್ರ, ದೇಶದಾದ್ಯಂತ ಜಾರಿ: ಡಾ.ಕೆ ಸುಧಾಕರ್

ಯಡಿಯೂರಪ್ಪ ಅವರ ಈ ಘೋಷಣೆ ಪಕ್ಷದಲ್ಲಿ ನಾನಾ ತರ್ಕಗಳಿಗೆ ವೇದಿಕೆ ಒದಗಿಸಿದೆ. ಚುನಾವಣೆಗೆ ಒಂಭತ್ತು ತಿಂಗಳಿರುವಾಗ ಯಡಿಯೂರಪ್ಪ ಅವರ ಈ ಘೋಷಣೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಯಡಿಯೂರಪ್ಪ ಅವರದ್ದೇ ವೈಯಕ್ತಿಕ ನಿರ್ಧಾರವಾಗಿದೆ. ಆದ್ರೆ ಇದಕ್ಕೆ ಹೈಕಮಾಂಡ್ ಒಪ್ಪಿಗೆ ಕೊಡುತ್ತಾ ಇಲ್ವಾ ಅನ್ನೋ ಜಿಜ್ಞಾಸೆಯೂ ಹುಟ್ಟಿಕೊಂಡಿದೆ. ಬಿಜೆಪಿ ಹೈಕಮಾಂಡ್, ವಿಜಯೇಂದ್ರಗೆ 2018ರ ಚುನಾವಣೆಯಲ್ಲಿ ವರುಣಾದಿಂದ ಟಿಕೆಟ್ ನಿರಾಕರಿಸಿತ್ತು. ಬಳಿಕ ನಡೆದ ಕೆಲವು ಉಪಚುನಾವಣೆಗಳಲ್ಲಿ ವಿಜಯೇಂದ್ರ ಸ್ಪರ್ಧೆಯ ಮಾತು ಕೇಳಿ ಬರುತ್ತಿತ್ತು. ಇತ್ತೀಚೆಗೆ ಪರಿಷತ್ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ವಿಜಯೇಂದ್ರಗೆ ಹೈಕಮಾಂಡ್ ಮತ್ತೆ ನಿರಾಸೆ ಮೂಡಿಸಿತ್ತು. ಇಷ್ಟಿದ್ರೂ ವಿಜಯೇಂದ್ರ, ಕಳೆದ ಕೆಲವು ವರ್ಷಗಳಿಂದ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ರು. ಹಳೇ ಮೈಸೂರು ಭಾಗದ ವರುಣಾ ಅಥವಾ ಗುಬ್ಬಿ ಕ್ಷೇತ್ರಗಳಲ್ಲಿ ವಿಜಯೇಂದ್ರ ಸ್ಪರ್ಧಿಸಲು ಬಯಸಿದ್ರು. ಅವರಿಗೆ ಶಿಕಾರಿಪುರದಲ್ಲೂ ಸ್ಪರ್ಧಿಸುವಂತೆ ಭಾರೀ ಒತ್ತಾಯ ಇತ್ತು. ವಿಜಯೇಂದ್ರ ಒಂದು ಕಡೆ ಹೈಕಮಾಂಡ್‍ನ ಅಸಹಕಾರ ಮತ್ತೊಂದು ಕಡೆ ಕ್ಷೇತ್ರದ ಆಯ್ಕೆ ಗೊಂದಲದಲ್ಲಿದ್ದ ವೇಳೆಯಲ್ಲೇ ತಂದೆ ಯಡಿಯೂರಪ್ಪ ಘೋಷಣೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನವರು ನನ್ನನ್ನು ಜೈಲಿಗೆ ಹಾಕಲು ಪ್ರಯತ್ನಿಸಿದ್ದರು: ಎಚ್‍ಡಿಕೆ

ಯಡಿಯೂರಪ್ಪ ಅವರ ಈ ನಡೆ ಹಿಂದೆ ಸಾಕಷ್ಟು ಲೆಕ್ಕಾಚಾರಗಳು ಕಂಡುಬರುತ್ತಿವೆ. ಶಿಕಾರಿಪುರ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಡದೇ ತಮ್ಮ ಕುಟುಂಬದ ಹಿಡಿತದಲ್ಲಿ ಇರಿಸಿಕೊಳ್ಳುವ ಉದ್ದೇಶವೂ ಇದರ ಹಿಂದಿದೆ. ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರಗೆ ಈ ಸಲವೂ ಹೈಕಮಾಂಡ್ ಟಿಕೆಟ್ ನಿರಾಕರಿಬಹುದೆಂಬ ಆತಂಕವೂ ಇದರಲ್ಲಿ ಇಣುಕಿದೆ. ಹೀಗಾಗಿ ತಾವೇ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡುವ ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಪುತ್ರನಿಗೆ ಈ ಸಲ ಶತಾಯಗತಾಯ ವಿಧಾನಸಭೆಗೆ ಟಿಕೆಟ್ ಕೊಡಿಸಲೇಬೇಕೆಂಬ ಹಟವೂ ಇದರಲ್ಲಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಈ ನಡೆ ಹೈಕಮಾಂಡ್‍ಗೂ ಗೊಂದಲ ಮೂಡಿಸಿದೆ. ಹೈಕಮಾಂಡ್‍ನ ಪ್ರತಿಕ್ರಿಯೆ ಈ ವಿಚಾರದಲ್ಲಿ ಏನಿರುತ್ತೋ ಕಾದುನೋಡಬೇಕಿದೆ.

Live Tv

Leave a Reply

Your email address will not be published.

Back to top button