ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಸುಮಾರು 347 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ.
ಬೆಳ್ತಂಗಡಿ ಯುವ ಶಾಸಕ ಹರೀಶ್ ಪೂಂಜಾ ಅವರ ಸತತ ಪರಿಶ್ರಮದಿಂದ ನೂರಾರು ಕೋಟಿ ರೂಪಾಯಿ ಅನುದಾನ ಬೆಳ್ತಂಗಡಿ ತಾಲೂಕಿಗೆ ಬಂದಿದೆ. ಕಾಮಗಾರಿಯ ಶಿಲಾನ್ಯಾಸಕ್ಕಾಗಿ ಉಜಿರೆಯ ಎಸ್‍ಡಿಎಂ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಹಾಕಲಾಗಿತ್ತು. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಿಎಂ ಯಡಿಯೂರಪ್ಪ, ಬಳಿಕ ಸಭಾ ಕಾರ್ಯಕ್ಕೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರು.
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಂದಿನ ಮೂರೂವರೆ ವರ್ಷ ಸ್ಥಿರ ಸರ್ಕಾರ ಜನತೆಗೆ ನೀಡಿ ರಾಜ್ಯವನ್ನು ಸಮೃದ್ಧಿಯಡೆಗೆ ಕೊಂಡೊಯ್ಯುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ಪ್ರಗತಿಯನ್ನು ತೀವ್ರಗೊಳಿಸಿ ಜನತೆಯಲ್ಲಿ ನೆಮ್ಮದಿ ಮೂಡಿಸುವುದು ಸರ್ಕಾರದ ಧ್ಯೇಯವಾಗಿದೆ ಅಂತ ತಿಳಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತಿವೃಷ್ಟಿ ಸಂದರ್ಭದಲ್ಲಿ ಜನತೆ ಸರಕಾರಕ್ಕೆ ಬಹಳ ನೆರವು ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅತಿವೃಷ್ಟಿ ಸಂದರ್ಭದಲ್ಲಿ ಸುಮಾರು 25 ಕೋಟಿ ರೂಪಾಯಿ ನೆರವು ನೀಡಿದ್ದು, ಇದಕ್ಕಾಗಿ ಸರಕಾರ ಆಬಾರಿ ಎಂದರು.
ಬೆಳ್ತಂಗಡಿ ತಾಲೂಕಿನ ಕಣಿಯೂರು ನಲ್ಲಿ ಹೋಬಳಿ ಕೇಂದ್ರ ಸ್ಥಾಪನೆ, ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಡಿಯೂರು ಎಂಬಲ್ಲಿ ಶನಿವಾರ ಗುಡ್ಡ ಕುಸಿದು ಸಾವನ್ನಪ್ಪಿದವರಿಗೆ ತಲಾ ಮೂರು ಲಕ್ಷ ರೂ.ಪರಿಹಾರವನ್ನು ಸಿಎಂ ಘೋಷಣೆ ಮಾಡಿದರು.
ಬೃಹತ್ ಕಾರ್ಯಕ್ರಮಕ್ಕಾಗಿ ತಾಲೂಕಿನ ವಿವಿಧ ಕಡೆಯಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದು, ಉಜಿರೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಕ್ಕೆ ಶುಭ ಕೋರುವ ಪ್ಲೆಕ್ಸ್ ಬ್ಯಾನರ್ ಗಳು ರಾರಾಜಿಸಿದವು.