ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರದಮದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಸಿಎಂ ಕೂಡ ಸಮಾರಂಭದಲ್ಲಿ ಪಾಲ್ಗೋಳ್ಳುವ ನಿಟ್ಟಿನಲ್ಲಿ ಶನಿವಾರ ಸಂಜೆ ವಾರಣಾಸಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸಿಎಂ ಕೈಮುಗಿದು ಮನವಿ ಮಾಡಿದ್ರೂ ನೆರೆ ಪರಿಹಾರದ ಬಗ್ಗೆ ಏನೂ ಮಾತನಾಡದ ಮೋದಿ
ಸಿಎಂ ಯಡಿಯೂರಪ್ಪ ಅವರು ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ರಾತ್ರಿ ವಾರಣಾಸಿಯಲ್ಲೇ ವಾಸ್ತವ್ಯ ಹೂಡಲಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಸಮಾರಂಭದಲ್ಲಿ 18 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಭಾಷಾಂತರಗೊಂಡ ‘ಸಿದ್ಧಾಂತ ಶಿಖಾಮಣಿ’ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಿದ್ಧಾಂತ ಶಿಖಾಮಣಿ ಕೃತಿಯು ವೀರಶೈವ ಧರ್ಮದ ಧರ್ಮಗ್ರಂಥವಾಗಿದೆ.
ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಯಡಿಯೂರಪ್ಪ ಅವರು ತುಮಕೂರಿನಲ್ಲಿ ಕಳೆದ ತಿಂಗಳು ನಡೆದ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಕೈ ಮುಗಿದು ನೆರೆ ಪರಿಹಾರದ ಹಣಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆದರೆ ಪ್ರಧಾನಿ ಮೋದಿ, ಪರಿಹಾರ ನೀಡುವ ಕುರಿತಾಗಿ ಯಾವುದೇ ಮಾತನಾಡಿರಲಿಲ್ಲ.
ಪ್ರಧಾನಿ ಮೋದಿ ಜೊತೆಗೆ ಭಾನುವಾರ ವೇದಿಕೆ ಹಂಚಿಕೊಳ್ಳುತ್ತಿರುವ ಸಿಎಂ ಯಡಿಯೂರಪ್ಪ ಅವರು ನೆರೆ ಪರಿಹಾರಕ್ಕಾಗಿ ಮತ್ತೆ ಮನವಿ ಸಲ್ಲಿಸುತ್ತಾರಾ? ಸಂಪುಟ ಪುನಾರಚನೆ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.