ಹುಬ್ಬಳ್ಳಿ: ವಿರೋಧ ಪಕ್ಷದಲ್ಲಿದ್ದ ನಮ್ಮನ್ನು ಆಡಳಿತಕ್ಕೆ ತಂದಿದ್ದು ಅನರ್ಹ ಶಾಸಕರು. ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದು ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಅನರ್ಹ ಶಾಸಕರ ವಿರುದ್ಧ ಪಕ್ಷದ ಮುಖಂಡರು ಮಾತನಾಡಿದ್ದಾರೆ. ಇದಕ್ಕೆ ಸಭೆಯಲ್ಲಿ ಅತೀವ ಬೇಸರ ವ್ಯಕ್ತಪಡಿಸಿದ ಬಿಎಸ್‍ವೈ ಬಿಜೆಪಿ ನಾಯಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅನರ್ಹರ ತ್ಯಾಗ ಗಮನಕ್ಕೂ ಬರಲೇ ಇಲ್ಲ. ಅವರ ತ್ಯಾಗದ ಫಲವಾಗಿಯೇ ಇಂದು ನಾವು ಅಧಿಕಾರದಲ್ಲಿದ್ದೇವೆ. ಅವರು ರಾಜೀನಾಮೆ ಕೊಡುವ ಅಗತ್ಯವಾದರೂ ಏನಿತ್ತು. ನನ್ನನ್ನು ನಂಬಿ ಅವರು ರಾಜೀನಾಮೆ ನೀಡಿದ್ದಾರೆ. ಸುಪ್ರೀಂ ಕೋರ್ಟಿನಿಂದ ನಾಳೆ ನಾಡಿದ್ದು ತೀರ್ಪು ಬರುತ್ತದೆ. ಶೇ.90ರಷ್ಟು ಅನರ್ಹರು ಚುನಾವಣೆಗೆ ನಿಲ್ಲುತ್ತಾರೆ. ನನಗೆ ತುಂಬಾ ನೋವಾಗಿದೆ. ಹಿರಿಯ, ಕಿರಿಯ ನಾಯಕರಿಂದ ನೋವಾಗಿದೆ. ಕೈ ಮುಗಿಯುವೆ ಈ ಸಂಗತಿ ಹೊರಗೆ ಹೋಗುವುದು ಬೇಡ ಎಂದು ಬಿಎಸ್‍ವೈ ಮನವಿ ಮಾಡಿಕೊಂಡಿದ್ದಾರೆ.
ಅನರ್ಹ ಶಾಸಕರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು. ಈ ಮಾತು ನಿಮ್ಮ ಬಾಯಲ್ಲಿ ಬರಲಿಲ್ಲ. ನೀವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೀರಿ? ಇಂದು ನೀವು ಮಾತನಾಡಿದ್ದು ನಾಲ್ಕು ಗೋಡೆಗಳ ಮಧ್ಯೆಯೇ ಇರಲಿ. ಈ ಕುರಿತು ಹೆಚ್ಚು ಚರ್ಚೆ ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಉಳಿಸುವ ಧಾಟಿಯಲ್ಲಿ ನೀವು ಯಾರೂ ಮಾತನಾಡಿಲ್ಲ. 17 ಅನರ್ಹರ ಬಗ್ಗೆ ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಬಾಂಬೆಯಲ್ಲಿ 2.5 ತಿಂಗಳು ಇಟ್ಟಿದ್ದರು. ಇದೆಲ್ಲ ನಿಮಗೆ ಗೊತ್ತಿದೆ ತಾನೆ? ಎರಡೂವರೆ ಮೂರು ತಿಂಗಳು ಅವರು ಕ್ಷೇತ್ರಕ್ಕೆ ಹೋಗಿಲ್ಲ. ಹೆಂಡತಿ, ಮಕ್ಕಳ ಮುಖ ನೋಡಿಲ್ಲ. ಈಗ ಉಪ ಚುನಾವಣೆ ಏನಾಗುತ್ತೋ ಗೊತ್ತಿಲ್ಲ. ಇಷ್ಟಾದರೂ ನೀವು ಅವರ ವಿರುದ್ಧ ಮಾತನಾಡುತ್ತಿದ್ದೀರಿ ಎಂದು ಹೇಳಿ ತರಾಟೆ ತೆಗೆದುಕೊಂಡಿದ್ದಾರೆ.
ಲಕ್ಷ್ಮಣ ಸವದಿ ಕೇವಲ 30 ಸಾವಿರ ಮತದಿಂದ ಸೋತಿದ್ದಾರೆ. ರಾಜು ಕಾಗೆ ಹೆಸರನ್ನೇ ಹೇಳುತ್ತೀರಿ. ಇದು ಎಷ್ಟರ ಮಟ್ಟಿಗೆ ಸರಿ? ಇದನ್ನು ನಾನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. ಒಳ್ಳೆ ಉದ್ದೇಶಕ್ಕೆ ಬೆಲೆಯೇ ಇಲ್ಲ. ವಾಸ್ತವ ಸ್ಥಿತಿ ತಿಳಿಯದೇ ನೀವು ಮಾತನಾಡಿದ್ದೀರಿ. ಈ ಎಲ್ಲ ಸಂಗತಿಗಳನ್ನು ಕೇಂದ್ರ ನಾಯಕರ ಗಮನಕ್ಕೆ ತರೋಣ. ನಾನಂತೂ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ನಾನೇ ಅಪರಾಧ ಮಾಡಿದಂತೆ ಕಾಣುತ್ತಿದೆ. ಅನರ್ಹರನ್ನು ನಂಬಿಸಿ ನಾನು ತಪ್ಪು ಮಾಡಿದ್ದೇನೆ. ಐ ನೆವರ್ ಎಕ್ಸಪೆಕ್ಟೆಡ್. ಈ ಸಭೆಗೆ ನಾನು ಬರಬಾರದಿತ್ತು ಎಂದು ಹೇಳಿ ಭಾವುಕರಾಗಿದ್ದಾರೆ.