ಬೆಂಗಳೂರು: ಆಪರೇಷನ್ ಕಮಲ ಮಾಡಿದ್ದೂ ಆಯ್ತು, ಯಡಿಯೂರಪ್ಪ ಸಿಎಂ ಆಗಿದ್ದು ಆಯ್ತು. ಆದರೆ ಬಿಎಸ್‍ವೈ ಸಿಎಂ ಆಗಿದ್ದು ಮಾತ್ರ ತಮ್ಮ ಅದೃಷ್ಟದ ಕಾರಿನಿಂದಲೇ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿ ಹೊಸ ಕಾರಿನ ಬದಲು ಬಿಎಸ್‍ವೈ ಹಳೇ ಕಾರನ್ನೇ ಬಳಸುತ್ತಾ ಕಾರುಬಾರು ನಡೆಸುತ್ತಿದ್ದಾರೆ.
ಯಡಿಯೂರಪ್ಪ ಅವರು ಸಿಎಂ ಆಗಿ 9 ದಿನ ಕಳೆದಿದೆ. ಆದರೂ ಹಳೇ ಕಾರನ್ನು ಅವರು ಬಳಸುತ್ತಿದ್ದಾರೆ. ಅದು ಅದೃಷ್ಟದ ಕಾರು ಎನ್ನುವುದೆ ಇದಕ್ಕೆ ಕಾರಣವಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಹೊಸ ಕಾರು ಕೊಟ್ಟರೂ ಕೂಡ ತೆಗೆದುಕೊಳ್ಳದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಳಸುತ್ತಿದ್ದ ಹಳೇ ಕಾರನ್ನೇ ಯಡಿಯೂರಪ್ಪನವರು ಬಳಸುತ್ತಿದ್ದಾರೆ. ಇದನ್ನೂ ಓದಿ:ಲಕ್ಕಿ ನಿವಾಸಕ್ಕೆ ಬಿಎಸ್‍ವೈ ಶಿಫ್ಟ್ – ಭರದಿಂದ ಸಾಗಿದೆ ಸುಣ್ಣ, ಬಣ್ಣ ಹೊಡೆಯುವ ಕೆಲಸ
ಯಡಿಯೂರಪ್ಪನವರು ವಿಪಕ್ಷ ನಾಯಕನಾಗಿದ್ದಾಗ ಕೆಎ 01 ಜಿ 6309 ನೋಂದಣಿ ಸಂಖ್ಯೆಯ ಟಯೋಟಾ ಫಾರ್ಚೂನರ್ ಕಾರನ್ನು ನೀಡಲಾಗಿತ್ತು. ಈ ಕಾರು ಬಳಕೆ ಮಾಡೋಕೆ ಶುರು ಮಾಡಿದ ಮೇಲೆ ಯಡಿಯೂರಪ್ಪ ಅವರ ರಾಜಕೀಯದ ಅದೃಷ್ಟ ಖುಲಾಯಿಸಿದೆ ಎನ್ನಲಾಗಿದೆ. ಆದ್ದರಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿದ್ದು, ಆಪರೇಷನ್ ಕಮಲ ಕೈ ಹಿಡಿದಿದ್ದು ಜೊತೆಗೆ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಏರಿದ್ದು ಅನ್ನೋದು ಯಡಿಯೂರಪ್ಪ ಅವರ ಬಲವಾದ ನಂಬಿಕೆಯಾಗಿದೆ ಎಂದು ಆಪ್ತರು ಹೇಳುತ್ತಾರೆ.
ಹೀಗಾಗಿಯೇ ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಅವರು ಮಾತ್ರ ಇಲ್ಲಿವರೆಗೂ ಹಳೇ ಟಯೋಟಾ ಫಾರ್ಚುನರ್ ಕಾರನ್ನು ಬದಲಾಯಿಸೋಕೆ ಮನಸ್ಸೇ ಮಾಡಿಲ್ಲ. ಈ ಹಿಂದೆ ಸಿಎಂ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕಪ್ಪು ಬಣ್ಣದ ಕಾರ್ ಅದೃಷ್ಟವಾಗಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಗೆ ಕುಳಿತಿದ್ದ ಅಪಶಕುನ ಎಂದು ವ್ಯಾಪಕ ಚರ್ಚೆ ನಡೆದಿತ್ತು.