ಮಡಿಕೇರಿ: ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪನವರು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಡಿಕೇರಿ ತಾಲೂಕಿನ ಸುತ್ತಮುತ್ತ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಗರಂ ಆಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಅವರು, ಸುಂಟಿಕೊಪ್ಪದ ಪ್ರವಾಹ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅವಸ್ಥೆ ಕಂಡು ಬಹಳ ಬೇಸರವಾಯಿತು. ಜನರು ನನ್ನ ಬಳಿ ಕಣ್ಣೀರು ಹಾಕಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಮೊದಲು ಗಂಜಿ ಕೇಂದ್ರದ ಹೆಸರನ್ನು ತೆಗೆದು ರಿಲೀಫ್ ಕ್ಯಾಂಪ್ ಎಂದು ಹೆಸರನ್ನಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಪ್ರವಾಹದಿಂದಾಗಿ ಜಿಲ್ಲೆಯಾದ್ಯಂತ ಸುಮಾರು 7 ಮಂದಿ ಮೃತಪಟ್ಟಿದ್ದಾರೆ. 3,000 ಕ್ಕೂ ಹೆಚ್ಚಿನ ಮನೆಗಳು ನೆಲಸಮವಾಗಿವೆ. ಎರಡು ಹೋಬಳಿಗಳು ಸಂಪೂರ್ಣವಾಗಿ ನಾಶವಾಗಿಯೇ ಹೋಗಿವೆ. ಪುನರ್ವಸತಿ ಕೇಂದ್ರಗಳಲ್ಲಿ ಸಂತಸ್ತರಿಗೆ ಆಹಾರ ವ್ಯವಸ್ಥೆಗಳು ಸರಿಯಾಗಿ ಆಗುತ್ತಿಲ್ಲ. ಒಂದು ತರಕಾರಿಯೂ ಸಹ ಕೇಂದ್ರಗಳಲ್ಲಿಲ್ಲ. ಕೇವಲ ಬಿಸ್ಕತ್-ಬನ್ ನೀಡಿದರೇ ಹೇಗೆ? ಪ್ರವಾಹ ಸಂತ್ರಸ್ಥರಿಗೆ ಜಿಲ್ಲಾಡಳಿತ ಸಮರ್ಪಕರವಾಗಿ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾಧಿಕಾರಿಗಳ ಎದುರಲ್ಲೇ ಅಸಮಾಧಾನ ಹೊರಹಾಕಿದರು.
ಪುನರ್ವಸತಿ ಕೇಂದ್ರಗಳಲ್ಲಿ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ನೆರವು ಸಿಗುತ್ತಿಲ್ಲ. ಇಷ್ಟಾದರೂ ಜಿಲ್ಲಾಡಳಿತ ಏನು ಮಾಡುತ್ತಿದೆ? ಖಾಸಗಿಯವರು ಹೇಗೆ ಜನರಿಗೆ ಸಹಾಯ ಮಾಡುತ್ತಿದ್ದಾರೆ ಅದನ್ನು ನೋಡಿ ಕಲಿಯಿರಿ. ಸಂತ್ರಸ್ಥರಿಗೆ ಅಧಿಕಾರಿಗಳು ಕನಿಷ್ಠ ಸೌಲಭ್ಯವನ್ನು ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv