ಚಿತ್ರದುರ್ಗ: ಕೇಂದ್ರ ಸರ್ಕಾರದಿಂದ ಎರಡನೇ ಕಂತಿನ ನೆರೆ ಪರಿಹಾರದ ಹಣ ಬರುವುದಿಲ್ಲ ಅಂತ ಹೇಳುವುದಕ್ಕೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ದೇಶದ ಪ್ರಧಾನಿನಾ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ನಗರದ ಮುರುಘಾಮಠದಲ್ಲಿ ಮಾತನಾಡಿದ ಸಿಎಂ, ಕುಮಾರಸ್ವಾಮಿ ಅವರಿಗೆ ಅತೃಪ್ತಿ, ಅಸಮಾಧಾನ ಇದೆ. ಹೀಗಾಗಿ ಅವರು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಬೇಜವಾಬ್ದಾರಿತನದ ಹೇಳಿಕೆ ನೀಡುವುದು ಶೋಭೆಯಲ್ಲ. ಹೇಳಿಕೆ ಕೊಡುವ ಮುನ್ನ ಹತ್ತು ಬಾರಿ ಯೋಚಿಸಲಿ ಎಂದು ಗುಡುಗಿದರು.
Advertisement
Advertisement
ಕೇಂದ್ರ ಸರ್ಕಾರವು 1,200 ಕೋಟಿ ರೂ. ನೆರೆ ಪರಿಹಾರ ನೀಡಿದಾಗಲೂ ಎಚ್.ಡಿ.ಕುಮಾರಸ್ವಾಮಿ ಹಗುರವಾಗಿ ಮಾತನಾಡಿದರು. ಈಗ ಎರಡನೇ ಕಂತು ಬರುವುದಿಲ್ಲ ಎನ್ನುತ್ತಿದ್ದಾರೆ. ಹೀಗೆ ಹೇಳುವುದಕ್ಕೆ ಅವರು ಯಾರು? ಇಂತಹ ತೀರ್ಮಾನ ತೆಗದುಕೊಳ್ಳಲು ಅವರೇನು ಕೇಂದ್ರ ಸರ್ಕಾರನಾ? ಅವರಿಗೇನು ಅಧಿಕಾರವಿದೆ ಎಂದು ಪ್ರಶ್ನಿಸಿ, ಕಿಡಿಕಾರಿದರು.
Advertisement
ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ ಪರಿಹಾರದ ಹಣದಿಂದ ನೆರೆ ಸಂತ್ರಸ್ತರ ಹಾಗೂ ನೆರೆ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ. ನವೆಂಬರ್, ಡಿಸೆಂಬರ್ ನಲ್ಲಿ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿ, ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
Advertisement
ಮುರುಘಾಮಠದ ದಸರಾ ಉತ್ಸವದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಾಗಿರುವ ಅತಿವೃಷ್ಠಿ ಪರಿಹಾರಕ್ಕೆ ಮೊದಲು ಹಣ ನೀಡಬೇಕಿದೆ. ಹೀಗಾಗಿ ಬೇರೆ ಯೋಜನೆಗಳಿಗೆ ಹಣ ನೀಡುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಅಲ್ಲದೆ ಶಾಸಕರು ಕೇಳುವ ಬೇರೆ ಯೋಜನೆಗಳಿಗೆ ಹಣ ನೀಡುವ ಸ್ಥಿತಿ ಸಹ ಸದ್ಯಕ್ಕಿಲ್ಲ ಅಂತ ಅಷ್ಟೇ ನಾನು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಚಿತ್ರದುರ್ಗದಲ್ಲಿ ಮುರುಘಾಮಠ ಪ್ರತಿಷ್ಠಾಪಿಸುತ್ತಿರುವ 325 ಅಡಿ ಎತ್ತರದ ಬಸವ ಪ್ರತಿಮೆಗೆ ಮುಂಬರುವ ಬಜೆಟ್‍ನಲ್ಲಿ 25 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಮುರುಘಾ ಶ್ರೀಗಳಿಗೆ ಸಿಎಂ ಭರವಸೆ ನೀಡಿದರು. ಈ ಹಿಂದೆ ನಾನು ಸಿಎಂ ಆಗಿದ್ದಾಗ ಬಸವ ಪ್ರತಿಮೆಗೆ 10 ಕೋಟಿ ರೂ. ನೀಡಲಾಗಿತ್ತು. ಆದರೆ ಈಗ ಮತ್ತೆ ದೇವರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ. ಹೀಗಾಗಿ ಬಸವ ಪ್ರತಿಮೆಗೆ ನಾನು ಹಣ ನೀಡುವಂತಾಗಿದೆ ಎಂದರು.